ಹೊಸದಿಗಂತ ವರದಿ,ಶಿವಮೊಗ್ಗ:
ಖ್ಯಾತ ಸಾಹಿತಿ ಹಾಗೂ 85 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಚ್.ಎಸ್. ವೆಂಕಟೇಶ ಮೂರ್ತಿ ಪ್ರಥಮ ಬಾರಿಗೆ ನಾಯಕ ನಟರಾಗಿ ಅಭಿನಯಿಸಿರುವ ಅಮೃತವಾಹಿನಿ ಚಲನಚಿತ್ರ ಜ.8 ರಂದು ತೆರೆ ಕಾಣುತ್ತಿದೆ ಎಂದು ಬೆಳ್ಳಿ ಮಂಡಲ ಹಾಗೂ ಯುಗಧರ್ಮ ಜಾನಪದ ಸಮಿತಿಯ ಡಾ. ಎಚ್.ಎಸ್. ನಾಗಭೂಷಣ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.8 ರಂದು ಸಂಜೆ 5.30ಕ್ಕೆ ನಗರದ ಭಾರತ್ ಸಿನಿಮಾಸ್ನಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಪತ್ರಕರ್ತ ವೈದ್ಯ ಕೂಡ ಇದರಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ವತ್ಸಲಾ ಮೋಹನ್, ಮಧು ಸಾಗರ್, ಮಂಜೇಶ್, ಮಂಜುನಾಥ ಬೂದಾಳ್, ಸುಪ್ರಿಯಾ ರಾವ್, ಆರ್.ಟಿ. ರಮಾ, ಗೀತಾ ಸೂರ್ಯವಂಶಿ, ಬೇಬಿ ಋತ್ವಿ, ಡಾ. ಶೈಲಾ. ಸಂತೋಷ್ ಕರ್ಕಿ ತಾರಾ ಬಳಗದಲ್ಲಿದ್ದಾರೆ ಎಂದರು.
ಎರಡು ಪೀಳಿಗೆಗಳ ಕನಸಿನ ಸಮ್ಮಿಲನ ಇದರಲ್ಲಿದ್ದು, ಕೌಟುಂಬಿಕ ಹಂದರದ ಚಿತ್ರಕಥೆಯನ್ನು ರಾಘವೇಂದ್ರ ಪಾಟೀಲ್ ಬರೆದಿದ್ದಾರೆ. ನರೇಂದ್ರ ಬಾಬು ನಿರ್ದೇಶಿಸಿದ್ದಾರೆ, ಉಪಾಸನಾ ಮೋಹನ್ ಸಂಗೀತ, ಎಚ್.ಎಸ್. ವಂಕಟೇಶ್ ಮೂರ್ತಿ ಸಾಹಿತ್ಯ, ಕೆ. ಗರೀಶ್ ಕುಮಾರ್ ಸಂಕಲನ, ಗಿರಿಧರ್ ಧವನ್ ಛಾಯಾಗ್ರಹಣ, ಶಿವಾನಂದ್ ಸಂಭಾಷಣೆ ಇದೆ ಎಂದರು.
ಅಮೃತವಾಹಿನಿಯ ಆಡಿಯೋ ಸಿಡಿ ಬೆಂಗಳೂರಿನ ರೇಣುಕಾಂಬ ಚಿತ್ರ ಮಂದಿರ ಹಾಗೂ ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಭಾಂಗಣದಲ್ಲಿ ಈಗಾಗಲೇ ಬಿಡುಗಡೆಯಾಗಿದೆ ಎಂದು ಹೇಳಿದರು.