Saturday, June 25, 2022

Latest Posts

ನಾರಾಯಣಾಚಾರ್ ತೇಜೋವಧೆ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ: ಮನು ಮುತ್ತಪ್ಪ ಆರೋಪ

ಮಡಿಕೇರಿ: ತಲಕಾವೇರಿ ಕ್ಷೇತ್ರದಲ್ಲಿ ಕಳೆದ ಸುಮಾರು ಆರು ದಶಕಗಳಿಂದ ಪೂಜಾ ಕೈಂಕರ್ಯಗಳನ್ನು ನಿಷ್ಕಳಂಕವಾಗಿ
ನಡೆಸುತ್ತಾ ಬಂದಿದ್ದ ನಾರಾಯಣ ಆಚಾರ್ ಅವರ ತೇಜೋವಧೆ ಮಾಡುವಂತಹ ಹೇಳಿಕೆಗಳನ್ನು ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚುರ ಪಡಿಸುತ್ತಿರುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಅಡಗಿರುವುದಾಗಿ ಶ್ರೀ ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಅಪ್ಪಚಟ್ಟೋಳಂಡ
ಮನು ಮುತ್ತಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಕಾವೇರಿ ಕ್ಷೇತ್ರದಲ್ಲಿ ತಮ್ಮ ಮಾತು ನಡೆಯುತ್ತಿಲ್ಲ ಎನ್ನುವ ಕಾರಣಗಳ ಹಿನ್ನೆಲೆಯಲ್ಲಿ, ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಮಳೆಗಾಳಿ, ಬಿಸಿಲನ್ನು ಲೆಕ್ಕಿಸದೆ ಕಾವೆÉೀರಿಯ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದ ನಾರಾಯಣ ಆಚಾರ್ ಅವರ ವಿರುದ್ಧ, ಅವರು ಗತಿಸಿದ ಬಳಿಕ ಅತ್ಯಂತ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿರುವುದು ತಲಕಾವೇರಿಯ ಕ್ಷೇತ್ರಕ್ಕೆ ಶೋಭೆ ತರುವಂತದ್ದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗುಡ್ಡ ಕುಸಿತದಿಂದ ನಾರಾಯಣ ಆಚಾರ್ ಕುಟುಂಬ ದುರ್ಮರಣಕ್ಕೀಡಾದ ಹಂತದಲ್ಲಿ ಅವರ ತೇಜೋವಧೆ ಮಾಡುವ ರೀತಿಯ ಹೇಳಿಕೆಗಳನ್ನು ನೀಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಸೂತಕದ ಮನೆಯಲ್ಲಿ ಸಂಭ್ರಮವನ್ನು ಆಚರಿಸುವ ಮನಸ್ಸು ಯಾವತ್ತಿಗೂ ಒಳ್ಳೆಯದಲ್ಲವೆಂದು ಮನು ಮುತ್ತಪ್ಪ ಕಟುವಾಗಿ ನುಡಿದರು.
ತಲಕಾವೇರಿಯ ಭೂ ಕುಸಿತದಿಂದ ನಾರಾಯಣ ಆಚಾರ್ ಅವರ ಕುಟುಂಬ ಸಾವನ್ನಪ್ಪಿರುವುದು ಕೊಡಗಿಗೆ ತುಂಬಲಾರದ ನಷ್ಟವಾಗಿದ್ದು, ದೇಶ ವಿದೇಶಗಳಲ್ಲಿ ನೆಲೆಸಿರುವ ಕಾವೇರಿಯ ಭಕ್ತಾದಿಗಳಿಗೆ ದೊಡ್ಡ ಆಘಾತವನ್ನೇ ಉಂಟುಮಾಡಿದೆ. ನಾರಾಯಣ ಆಚಾರ್ ಅವರು ಕಾವೇರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಷ್ಟು ಅವಧಿಯಲ್ಲಿ ಭಕ್ತಾದಿಗಳನ್ನು ಮಾತನಾಡಿಸಿ, ಅವರಿಗೆ ಕ್ಷೇತ್ರದ ಪೂರ್ಣ ಮಾಹಿತಿಯನ್ನು ಒದಗಿಸಿಕೊಡುವ ಅತ್ಯಂತ ಮಹತ್ವದ ಕಾರ್ಯವನ್ನು ನಡೆಸಿಕೊಂಡು ಬಂದವರಾಗಿದ್ದು, ಇಂತಹ ಬಹುಮೂಲ್ಯ ಕಾರ್ಯವನ್ನು ಮುಂದೆ ನಡೆಸಿಕೊಂಡು ಹೋಗುವವರಾರು ಎಂದು ತಮ್ಮ ಅತೀವ ದುಃಖವನ್ನು ವ್ಯಕ್ತಪಡಿಸಿದರು.
ಅರ್ಚಕರು ಏನನ್ನೂ ಸಂಪಾದಿಸಬಾರದೆ?: ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರು ಹತ್ತು ಕೆ.ಜಿ. ಚಿನ್ನ ಹೊಂದಿದ್ದರು ಎಂಬುದೂ ಸೇರಿದಂತೆ ಯಾವುದೇ ಆಧಾರಗಳಿಲ್ಲದೆ ಆರೋಪಗಳನ್ನು ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಯಾವುದೇ ಕುರುಹುಗಳು ಇಲ್ಲಿಯವರೆಗೆ ದೊರಕಿಲ್ಲವೆಂದು ತಿಳಿಸಿದ ಅವರು, ಕ್ಷೇತ್ರದ ಪೂಜಾ ಕೈಂಕರ್ಯಗಳನ್ನು ನಡೆಸುವ ಒಂದು ಅರ್ಚಕ ಕಟುಂಬ ಏನನ್ನೂ ಸಂಪಾದಿಸಬಾರದೇ ಎಂದು ಪ್ರಶ್ನಿಸಿದ ಅವರುಮ ಏನೂ ಇಲ್ಲದೆ ಟಿಂಬರ್ ಲಾಬಿಯ ಮೂಲಕ ಮೇಲೆ ಬಂದವರು ಮಂತ್ರಿಯಾಗಿ ಓಡಾಡಿಲ್ಲವೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ನಾರಾಯಣ ಆಚಾರ್ ಕುಟುಂಬ ಶತಮಾನಗಳ ಹಿಂದೆ, ರಾಜನ ಆಳ್ವಿಕೆಯ ಅವಧಿಯಿಂದಲೇ ತಲಕಾವೇರಿ ಕ್ಷೇತ್ರದಲ್ಲಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಮಳೆ ಗಾಳಿಯ ಎಂತದ್ದೇ ಕಠಿಣ ಪರಿಸ್ಥಿತಿಗಳಲ್ಲಿ ಬೆಟ್ಟದ ತಪ್ಪಲಿನ ತಮ್ಮ ಮನೆಯಿಂದ ಕ್ಷೇತ್ರಕ್ಕೆ ಆಗಮಿಸಿ ನಿಷ್ಕಳಂಕವಾಗಿ ಕಾವೇರಿಯ ಸೇವೆಯನ್ನು ಮಾಡಿದ್ದಾರೆ. ಇವರಿಗೆ ಪೂರ್ವಿಕರಿಂದ ಬಂದ ಆಸ್ತಿ ಇದ್ದಿತಾದರೂ ಎಂದಿಗೂ ವಿಲಾಸಿ ಜೀವನ, ಮೋಜು ಮಸ್ತಿಯಲ್ಲಿ ತೊಡಗಿದವರಲ್ಲವೆಂದು ಮನು ಮುತ್ತಪ್ಪ ಸ್ಪಷ್ಟಪಡಿಸಿದರು.
ತಲಕಾವೇರಿ ಕ್ಷೇತ್ರದ ಬಗ್ಗೆ ಅಲ್ಲಿ ಸೇವೆ ಸಲ್ಲಿಸಿದ ಅರ್ಚಕರ ಕುರಿತು ಜ್ಞಾನವಿಲ್ಲದ ಮಂದಿ ಇನ್ನಾದರೂ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ತಲಕಾವೇರಿ ಕ್ಷೇತ್ರದ ಪೂಜಾ ಕಾರ್ಯಗಳೊಂದಿಗೆ ನಾರಾಯಣ ಆಚಾರ್ ಅವರು ಭಾಗಮಂಡಲದ ಮಂಡಲ ಪ್ರಧಾನರಾಗಿ, ತಮ್ಮ ಕಾರ್ಯಚಟುವಟಿಕೆಗಳ ಮೂಲಕ ಅಂದಿನ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಜಮ್ಮಡ ಕರುಂಬಯ್ಯ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದರೊಂದಿಗೆ ತಲಕಾವೇರಿ, ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಪ್ರಥಮ ಅಧ್ಯಕ್ಷರಾಗಿ, ಭಾಗಮಂಡಲ ವಿಎಸ್‍ಎಸ್‍ಎನ್ ಅಧ್ಯಕ್ಷರಾಗಿ, ಏಲಕ್ಕಿ ಸಹಕಾರ ಸಂಘದ ಅಧ್ಯಕ್ಷರಾಗಿ, ಮಡಿಕೇರಿ ಜನತಾ ಬಜಾರ್ ನಿರ್ದೇಶಕರಾಗಿ, ಭಾಗಮಂಡಲ ಕಾವೇರಿ ಶಾಲೆಯ ನಿರ್ದೇಶಕರಾಗಿ ಸಂಬಾರ ಮಂಡಳಿಯ ನಿರ್ದೇಶಕರಾಗಿ ಜನಪರವಾದ ಸೇವೆ ಸಲ್ಲಿಸುವ ಮೂಲಕ ಮೇರು ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಇವರು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಕೊಡಮಾಡುವ ಮಡಿಕೆರಿ ತಾಲೂಕು ಶ್ರೇಷ್ಠ ಸಹಕಾರಿ ಪ್ರಶಸ್ತಿಗೂ ಭಾಜರಾಗಿದ್ದರೆಂದು ತಿಳಿಸಿದರು.
ಗೋಷ್ಠಿಯಲ್ಲಿ ಭಾಗಮಂಡಲ ಗಿರಿಜನ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ರಂಜಿತ್, ಭಾಗಮಂಡಲ ನಿವಾಸಿಗಳಾದ ಪದ್ಮಯ್ಯ, ಪಾಡಿಯಮ್ಮನ ಮನು ಮಹೇಶ್ ಹಾಗೂ ಜಿಜೆಪಿ ಪ್ರಮುಖರಾದ ಕಾಳನ ರವಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss