ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಸದಿರುವುದನ್ನು ಖಂಡಿಸಿ ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ಡಿ.ದರ್ಜೆ ಗುತ್ತಿಗೆ ನೌಕರರು ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದಾರೆ.
ಆಜಾದ್ ಮೈದಾನದಲ್ಲಿ ಪ್ರತಿಭನೆ ನಡೆಸುತ್ತಿರುವ ನೌಕರರು ಕಳೆದ ನಾಲ್ಕು ತಿಂಗಳಿನಿಂದ ವೇತನ ನೀಡದಿರುವ ಹಿನ್ನೆಲೆಯಲ್ಲಿ ಬದುಕು ಸಾಗಿಸುವುದು ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೇತನ ಪಾವತಿ ಆಗುವವರೆಗೆ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ವೇತನ ಪಾವತಿಗಾಗಿ ಹಲವು ಬಾರಿ ಬೇಡಿಕೆ ಇಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಮನವಿ ಸಲ್ಲಿಸಿದ ಸಂರ್ಭದಲ್ಲಿ 8 ದಿನಗಳ ಕಾಲಾವಕಾಶ ಕೇಳಲಾಗಿತ್ತು. ಆದರೆ ಅದು ಮುಗಿದರೂ ವೇತನ ಬಿಡುಗಡೆ ಆಗಲಿಲ್ಲ ಎಂದು ದೂರಿದರು.
ಪ್ರತಿಭಟನಾಕಾರರನ್ನು ಬೆಂಬಲಿಸಿ ಜಿಲ್ಲಾ ಬಿಎಸ್ಪಿ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಡಿ.ದರ್ಜೆ ಗುತ್ತಿಗೆ ನೌಕರರು ಎಲ್ಲರೂ ಬಡಕುಟುಂಬದವರಾಗಿರುತ್ತಾರೆ. ಅಲ್ಲದೆ ಜೀವನ ನಿರ್ವಹಣೆಗೆ ವೇತನವನ್ನೇ ಅವಲಂಬಿಸಿರುತ್ತಾರೆ. ಇಂತಹದ್ದರಲ್ಲಿ ನಾಲ್ಕು ತಿಂಗಳ ಕಾಲ ವೇತನ ತಡೆ ಹಿಡಿದರೆ ಬದುಕು ಸಾಗಿಸುವುದು ಹೇಗೆ ಎಂದು ಪ್ರಶ್ನಿಸಿದರು. ಕೂಡಲೇ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಕ್ಷದ ಮುಖಂಡರುಗಳಾದ ಹರೀಶ್, ಗಂಗಾಧರ್, ಸುಧಾ ಇನ್ನಿತರರು ಭಾಗವಹಿಸಿದ್ದರು.