ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಫೆ.13ರಂದು ಕರೆ ನೀಡಲಾಗಿರುವ ಬಂದ್ ಗೆ ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಮತ್ತಷ್ಟು ಸಂಘಟನೆಗಳು ಬಂದ್ ನಿಂದ ಹಿಂದೆ ಸರಿದಿವೆ.
ಓಲಾ, ಉಬರ್, ಟ್ಯಾಕ್ಸಿ ಸಂಘಟನೆ, ಏರ್ ಪೋರ್ಟ್ ಟ್ಯಾಕ್ಸಿ ಚಾಲಕರ ಸಂಘ, ರೈತ ಸಂಘಟನೆ, ಹಸಿರು ಸೇನೆ, ಜಯ ಕರ್ನಾಟಕ ಸೇರಿದಂತೆ ವಿವಿಧ ನೂರಾರು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ.
ಹೋಟೆಲ್ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘಟನೆ, ನಾರಾಯಣ ಗೌಡ ಕರವೇ ಬಣ, ಬಿಎಂಟಿಸಿ, ಕೆಎಸ್ಆರ್ ಟಿಸಿ ನೌಕರರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ ನೀಡುವುದಾಗಿ ತಿಳಿಸಿವೆ.
ಮಾ.5ಕ್ಕೆ ವಿಧಾನಸೌಧ ಮುತ್ತಿಗೆ: ಗುರುವಾರ ಕರೆ ನೀಡಲಾಗಿರುವ ಬಂದ್ ಗೆ ನಾವು ಬೆಂಬಲ ನೀಡುವುದಿಲ್ಲ. ರಾಜ್ಯ ಸರ್ಕಾರ ಬಜೆಟ್ ಮಂಡಿಸುವ ದಿನ ಮುಷ್ಕರ ನಡೆಸಲಾಗುವುದು. ಮಾ.5ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಮುಂದಿನ ವಾರ ಸಿಎಂ ಮನೆಯವರೆಗೂ ರ್ಯಾಲಿ: ನಾಳಿನ ಕರ್ನಾಟಕ ಬಂದ್ ಗೆ ನಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಮಹಿಷಿ ವರದಿ ಯಾಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದರು. ಮುಂದಿನ ವಾರ ಸಿಎಂ ಮನೆಯವರೆಗೂ ರ್ಯಾಲಿ ನಡೆಸಲಾಗುವುದು ಎಂದರು.
ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ನಾಳೆ ಎಂದಿನಂತೆ ಪ್ರಥಮ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.