Sunday, June 26, 2022

Latest Posts

ನಾಳೆಯಿಂದ ಎಬಿವಿಪಿ ರಾಜ್ಯ ಸಮ್ಮೇಳನ

ಮಂಗಳೂರು: 20 ವರ್ಷಗಳ ಬಳಿಕ ಮಂಗಳೂರು ನಗರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ(ಎಬಿವಿಪಿ) ರಾಜ್ಯ ಸಮ್ಮೇಳನ ಜರುಗಲಿದೆ. ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಫೆ.7ರ ಅಶ್ವತ್ಥನಾರಾಯಣ ಸಮ್ಮೇಳನವನ್ನು ಉದ್ಘಾಟಿಸುವರು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ. ನಾಯಕ್ ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಎಬಿವಿಪಿ ಮಾಜಿ ರಾಷ್ಟ್ರಾಧ್ಯಕ್ಷ, ನಾಗಲ್ಯಾಂಡ್ ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಷ್ ಚೌಹಾಣ್ ಮತ್ತು ಮಂಗಳೂರು  ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಎಸ್. ಯಡಪಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಪರಾಹ್ನ 3.30ಕ್ಕೆ ಕರ್ನಾಟಕ ಜಾನಪದ ಅಕಾಡೆಮಿತಯ ಅಧ್ಯಕ್ಷೆ ಮಂಜಮ್ಮ ಜೋಗತಿ ಪ್ರದರ್ಶಿನಿ ಉದ್ಘಾಟಿಸುವರು ಎಂದು ಸ್ವಾಗತ ಸಮಿತಿ ಅಧ್ಯಕ್ಷರು ಹೇಳಿದರು.

ಶೈಕ್ಷಣಿಕ ಸಮಸ್ಯೆ ಚರ್ಚೆ: 39ನೆಯ ರಾಜ್ಯ ಸಮ್ಮೇಳನದಲ್ಲಿ ಸುಮಾರು 1500 ವಿದ್ಯಾರ್ಥಿ ಅಧ್ಯಾಪಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಆಡಳಿತಗಾರರು ಸಮ್ಮೇಳನದಲ್ಲಿ ಪಾಲ್ಗೊಂಡು ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಮಾಜಿಕ ಸಮಸ್ಯೆ, ಸವಾಲುಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ ಎಂದು ಕೆ.ಸಿ.ನಾಯಕ್ ವಿವರಿಸಿದರು.

ಕಾರ್ಯಕ್ರಮದ ಸ್ವರೂಪ: ಸಮ್ಮೇಳನದ ಭಾಗವಾಗಿ ಫೆ.8ರಂದು ಪೂರ್ವಾಹ್ನ 11 ಗಂಟೆಗೆ ‘ವರ್ತಮಾನ ಭಾರತ’ ಎಂಬ ವಿಷಯದ ಕುರಿತಾಗಿ ಎಬಿವಿಪಿ ನಿಕಟಪೂರ್ವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನಿಲ್ ಅಂಬೇಕರ್ ಭಾಷಣ ಮಾಡುವರು. ಫೆ.9ರ ಪೂರ್ವಾಹ್ನ 9 ಗಂಟೆಗೆ ಎಬಿವಿಪಿ ನಿಕಟಪೂರ್ವ  ಸಹ ಸಂಘಟನಾ ಕಾರ್ಯದರ್ಶಿ ಕೆ.ಎನ್. ರಘುನಂದನ್ ನಮ್ಮ ಕಾರ್ಯ ಪದ್ಧತಿ-ಸ್ವರೂಪ ಮತ್ತು ಔಚಿತ್ಯ ವಿಷಯವಾಗಿ ವಿಶೇಷ ಉಪನ್ಯಾಸ ನೀಡುವರು ಎಂದು ಕೆ..ಸಿ. ನಾಯಕ್ ನುಡಿದರು.

ಫೆ.9ರ ಪೂರ್ವಾಹ್ನ 11 ಗಂಟೆಗೆ ಶಿಕ್ಷಣ, ರಾಷ್ಟ್ರ ಮತ್ತು ಸಂಸ್ಕೃತಿ ಕುರಿತಾಗಿ ಅವಲೋಕನ ನಡೆಯಲಿದೆ. ಎಬಿವಿಪಿ ಮಾಜಿ ರಾಜ್ಯಾಧ್ಯಕ್ಷ ಚ.ನ. ಶಂಕರ ರಾವ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್ ಮತ್ತು ಎಬಿವಿಪಿ ರಾಜ್ಯ ಉಪಾಧ್ಯಕ್ಷ  ರೋಹಿಣಾಕ್ಷ ಶಿರ್ಲಾಲು ಅವಲೋಕನದಲ್ಲಿ ಭಾಗವಹಿಸುವರು ಎಂದು ಅವರು ಹೇಳಿದರು.

ಶೋಭಾಯಾತ್ರೆ: ಫೆ.8ರ ಸಂಜೆ 5ಗಂಟೆಗೆ ಆಯಾ ಪ್ರದೇಶಗಳ ಸಾಂಸ್ಕೃತಿಕ ವಿಶಿಷ್ಟತೆ-ಭವ್ಯತೆ ಸಾರುವ ಶೋಭಾಯಾತ್ರೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ. ನಗರದ ಕಾರ್ ಸ್ಟ್ರೀಟ್ ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷನಾರಾಯಣ ಪ್ರಧಾನ ಭಾಷಣ ಮಾಡಲಿದ್ದಾರೆ. ಎಬಿವಿಪಿ ರಾಜ್ಯ ನಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡಲಿರುವರು ಎಂದು ಕೆ.ಸಿ. ನಾಯಕ್ ಹೇಳಿದರು.

ಹಾಜಬ್ಬರಿಗೆ ಸನ್ಮಾನ: ಉದ್ಘಾಟನಾ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಗುವುದು. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ ಸನ್ಮಾನ ನೆರವೇರಿಸುವರು.

ಬಲಿಷ್ಠ ಸಂಘಟನೆ: ಎಬಿವಿಪಿ ರಾಜ್ಯದೆಲ್ಲೆಡೆ 260 ಶಾಖೆಗಳನ್ನು ಹೊಂದಿದೆ. 273 ಸಂಪರ್ಕ ಸ್ಥಾನಗಳಲ್ಲಿ ಚಟುವಟಿಕೆ ನಡೆಸುತ್ತಿದೆ. 5 ಲಕ್ಷಕ್ಕೂ ಅಧಿಕ ಕಾರ್ಯಕರ್ತರರಿದ್ದಾರೆ. 2500ಕ್ಕೂ ಅಧಿಕ ಕಾಲೇಜುಗಳಲ್ಲಿ ಎಬಿವಿಪಿ ಸಮಿತಿಗಳಿವೆ. 350ಕ್ಕೂ ಹೆಚ್ಚು ಹಾಸ್ಟೆಲ್ ಗಳಲ್ಲಿ ಕಾರ್ಯ ಸಂಪರ್ಕವಿದೆ.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೆಕ್ಕಪರಿಶೋಧಕ ಶಾಂತಾರಾಮ ಶೆಟ್ಟಿ ಕೋಶಾಧಿಕಾರಿ ರವಿ ಮಂಡ್ಯ, ಎಬಿವಿಪಿ ಮಂಗಳೂರು ನಗರ ಅಧ್ಯಕ್ಷೆ ಭಾರತಿ ಸಂಜಯ ಪ್ರಭು ಮತ್ತು ನಗರ ಕಾರ್ಯದರ್ಶಿ ಮಣಿಕಂಠ ಕಳಸ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss