ಹೊಸ ದಿಗಂತ ವರದಿ,ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮೊದಲ ಹಂತದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಪೂರ್ವಾಹ್ನ 11.30ಕ್ಕೆ ವೆನ್ಲಾಕ್ ಆಸ್ಪತ್ರೆಯ ಆಯುಷ್ ಬ್ಲಾಕ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲ ಹಂತದಲ್ಲಿ ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಆರೋಗ್ಯ ಕಾರ್ಯಕರ್ತರಿಗೆ ಲಿಸಿಕೆ ನೀಡಲಾಗುವುದು ಎಂದರು.
ಜೆಲ್ಲೆಗೆ 24,500 ಡೋಸ್ ಲಸಿಕೆ ಸರಬರಾಜು ಆಗಿದೆ. ಕೋವಿನ್ ವೆಬ್ಸೈಟ್ನಲ್ಲಿ 52,381 ಮಂದಿ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ದಿನವೊಂದಕ್ಕೆ ಲಸಿಕಾ ಕೇಂದ್ರವೊಂದರಲ್ಲಿ ನೂರು ಮಂದಿಗೆ ಲಸಿಕೆ ನೀಡಲಾಗುವುದು. 89 ಸರಕಾರಿ ಮತ್ತು 17 ಖಾಸಗಿ ಸಂಸ್ಥೆಗಳನ್ನು ಲಸಿಕೆ ನೀಡಲು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
10,212 ಸರಕಾರಿ ಮತ್ತು 42,169 ಖಾಸಗಿ ಸಂಸ್ಥೆಗಳ ಆರೋಗ್ಯ ಕಾರ್ಯಕರ್ತರು ಹೆಸರು ನೋಂದಾವಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ವೆನ್ಲಾಕ್ ಆಸ್ಪತ್ರೆ, ಸುರತ್ಕಲ್ನ ನಗರ ಆರೋಗ್ಯ ಕೇಂದ್ರ ಹಾಗೂ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಮತ್ತು ಸುಳ್ಯ ತಾಲೂಕು ಆಸ್ಪತ್ರೆಗಳನ್ನು ಲಸಿಕಾ ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದು ಅವರು ನುಡಿದರು.
ದ್ವಿತೀಯ ಹಂತದಲ್ಲಿ ಇಲಾಖೆಗಳು
ದ್ವಿತೀಯ ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಕಂದಾಯ, ಪೊಲೀಸ್, ನಗರಾಭಿವೃದ್ಧಿ ಸ್ಥಳೀಯಾಡಳಿತ ಸಂಸ್ಥೆಗಳ ಸಿಬ್ಬಂದಿ ಮತ್ತು 50 ವರ್ಷ ದಾಟಿರುವ ನಾಗರಿಕರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜ.20ರೊಳಗೆ ಇವರ ಮಾಹಿತಿಯನ್ನು ಕೋವಿನ್ ವೆಬ್ಸೈಟ್ನಲ್ಲಿ ದಾಖಲಿಸಲು ನಿರ್ದೇಶನಗಳಿವೆ ಎಂದು ಡಾ.ರಾಜೇಂದ್ರ ತಿಳಿಸಿದರು.
ಮೂರನೆಯ ಹಂತದಲ್ಲಿ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ. ಅದಕ್ಕೆ ಸಂಬಂಧ ಪಟ್ಟಂತೆ ಸರಕಾರದ ಹಂತದಿಂದ ಇನ್ನಷ್ಟೇ ಸೂಚನೆಗಳು ಬರಬೇಕಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ, ಲಸಿಕೆಯಿಂದ ಅಡ್ಡ ಪರಿಣಾಮ ಆಗುವುದಿಲ್ಲ. ಆದರೆ ಅಂತಹ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ವೈದ್ಯರ ತಂಡವನ್ನು ರಚಿಸಲಾಗಿದೆ. ಲಸಿಕೆ ಪಡೆದ ಫಲಾನುಭವಿ 30 ನಿಮಿಷಗಳ ಕಾಲ ಆರೋಗ್ಯ ಕಾರ್ಯಕರ್ತರ ಸಮಕ್ಷಮದಲ್ಲಿ ವಿಶ್ರಾಂತಿ ಪಡೆದು ಬಳಿಕ ತೆರಳ ಬೇಕಾಗಿರುತ್ತದೆ ಎಂದರು.