Wednesday, July 6, 2022

Latest Posts

ನಾಳೆಯ ಕನ್ನಡಕ್ಕಾಗಿ ತಂತ್ರಾಂಶ ಬಳಕೆಗೆ ಆದ್ಯತೆ: ಟಿ.ಎಸ್ ನಾಗಾಭರಣ

ಹೊಸ ದಿಗಂತ ವರದಿ, ಕಲಬುರಗಿ: 

ತಂತ್ರಾಂಶ ಬಳಸಿಕೊಂಡು ಮುನ್ನಡೆದಾಗ ಮಾತ್ರ ಕನ್ನಡ ಉಳಿಸಿ-ಬೆಳೆಸಲು ಸಾಧ್ಯ ಎಂದು ಸಿನಿಮಾ ಕ್ಷೇತ್ರದ ಖ್ಯಾತ ನಿರ್ದೇಶಕರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಯೋಗದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ಸೋಮವಾರ ನಡೆದ `ಕವಿರಾಜಮಾರ್ಗ ಪರಿಸರದ ಭಾಗ ಮತ್ತು ಸಂಸ್ಕೃತಿ’ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಹೀಗೆ ಹರಿದು ಹಂಚಿಹೋಗಿರುವ ಮನೋಭಾವ, ಮನಸ್ಥಿತಿಯನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದರು.
ಕರ್ನಾಟಕ ಸಾರಸ್ವತ ಲೋಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ `ಆದ್ಯರು’ ಎಂದರೆ ಕವಿರಾಜಮಾರ್ಗ ಪರಿಸರದ ಕಲ್ಯಾಣದ ನೆಲ. ಕನ್ನಡಕ್ಕೆ ಕಿರೀಟಪ್ರಾಯದಂತೆ. ಅತ್ಯಂತ ಶ್ರೀಮಂತವಾಗಿರುವ ಕನ್ನಡ ಭಾಗ, ಸಂಸ್ಕೃತಿ, ಪರಂಪರೆಯನ್ನು ಅರ್ಥಮಾಡಿಕೊಂಡು `ಭವಿಷ್ಯ’ದ ಕನ್ನಡ ಕಟ್ಟಬೇಕಾಗಿದೆ ಎಂದು ತಿಳಿಸಿದರು. ಒಂದು ಪ್ರದೇಶದ ಅಭಿವೃದ್ಧಿಯನ್ನು ಕೇವಲ ರಸ್ತೆ ಮತ್ತು ಕಟ್ಟಡಗಳಿಂದ ಅಳೆಯಲು ಬರುವುದಿಲ್ಲ. ಅದು ನಮ್ಮ ಕನ್ನಡ ಸಂಸ್ಕೃತಿ, ಪರಂಪರೆಯಿಂದ ಮಾತ್ರ ಸಾಧ್ಯ ಎಂದ ಅವರು, ರಾಷ್ಟ್ರಕೂಟರ ಕಾಲದ ಕವಿರಾಜಮಾರ್ಗಕಾರ ಇಡೀ ಕರ್ನಾಟಕದ ಸಾಹಿತ್ಯ, ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದೆ. ಇಲ್ಲಿನ ಕಲೆ, ಸಾಹಿತ್ಯ, ಸಂಗೀತ ಇತರ ಭಾಗದವರಿಗೆ ಹೆದ್ದಾರಿಯಾಗಿದೆ ಎಂದು ಹೇಳಿದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿವಿ ಕುಲಪತಿ ಪ್ರೊ . ಚಂದ್ರಕಾಂತ ಎಂ.ಯಾತನೂರ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ನಡೆಯುವ ಚಟುವಟಿಕೆಗಳನ್ನು ಕನ್ನಡ ಅಧ್ಯಯನ ಸಂಸ್ಥೆಯು ತನ್ನ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಾತನಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಶಯ ನುಡಿಗಳನ್ನಾಡಿದ ಧಾರವಾಡ ಕರ್ನಾಟಕ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ . ಶಾಂತಿನಾಥ ದಿಬ್ಬದ, ಕನ್ನಡ ಭಾಗ, ಕನ್ನಡ ಕವಿಗಳಿಗೆ ರಾಜಮಾರ್ಗವಾಗಿರುವ ಕವಿರಾಜಮಾರ್ಗ ಕೃತಿ ಕನ್ನಡದ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಕಲಾನಿಕಾಯದ ಡೀನರಾದ ಪ್ರೊ . ಎಚ್.ಟಿ. ಪ್ರೊ ತೆ, ಕನ್ನಡನಾಡಿಗೆ ಕಿರೀಟ ಆಗಿರುವ ಕಲ್ಯಾಣದ ಈ ಪ್ರದೇಶವನ್ನು ಅಲಕ್ಷಿಸಲಾಗುತ್ತಿದೆ. ಸಾಂಸ್ಕೃತಿಕ, ಸಾಹಿತ್ಯಕ ಪರಂಪರೆ ಹೊಂದಿರುವ ಕಲ್ಯಾಣ ಕರ್ನಾಟಕ, ಇಡೀ ಅಖಂಡ ಕರ್ನಾಟಕಕ್ಕೆ ಬಹಳ ಮಹತ್ವದ ಕೊಡುಗೆ ನೀಡಿದೆ ಎಂದರು.ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ರಾಜೇಂದ್ರ ಯರನಾಳೆ, ತೋಟಗಾರಿಕೆ ಇಲಾಖೆಯ ವಿಶ್ರಾಂತ ಅಧಿಕಾರಿ ಬಸವಲಿಂಗಪ್ಪ ಅಲ್ಹಾಳ, ಡಾ. ಸೂರ್ಯಕಾಂತ ಸುಜ್ಯಾತ್, ಪ್ರೊ. ಈಶ್ವರ ಇಂಗನ್, ಡಾ. ಬಿ.ಎಂ. ಕನಹಳ್ಳಿ, ಗುಲ್ಬರ್ಗಾ ವಿವಿ ಸಿಂಡಿಕೇಟ್ ಸದಸ್ಯ ಲಕ್ಷ್ಮಣ ರಾಜನಾಳಕರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಅತಿಥಿ ಉಪನ್ಯಾಸಕ ಡಾ. ಹನುಮಂತ ಮೇಲ್ಕೇರಿ, ಅತಿಥಿ ಉಪನ್ಯಾಸಕಿ ಡಾ. ಶೈಲಜಾ ಬಾಗೇವಾಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss