Thursday, January 28, 2021

Latest Posts

ನಾಳೆ ರೆಬಲ್‍ಸ್ಟಾರ್ ಅಂಬರೀಶ್ ಕಂಚಿನ ಪ್ರತಿಮೆ ಅನಾವರಣ

ಹೊಸ ದಿಗಂತ ವರದಿ, ಮಂಡ್ಯ:

ರೆಬಲ್‍ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳು ಮದ್ದೂರು ತಾಲೂಕು ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಅಂಬರೀಶ್ ಗುಡಿ ನಿರ್ಮಿಸಿ, ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಅವರು ನಾಳೆ ಪ್ರತಿಮೆ ಅನಾವರಣ ಮಾಡಲಿದ್ದಾರೆ.
ಮಂಡ್ಯದ ಗಂಡು ಎಂದೇ ಖ್ಯಾತರಾಗಿದ್ದ ಅಂಬರೀಶ್ ಅವರು ನಿಧನರಾಗಿ ನಾಳೆ (ನ. 24)ಕ್ಕೆ ಎರಡು ವರ್ಷಗಳು ಕಳೆದಿವೆ. ಕಲಿಯುಗ ಕರ್ಣ ಅಂಬರೀಶ್ ಅವರ ಅಭಿಮಾನಿಗಳು ಗುಡಿ ಕಟ್ಟಿ ಅದರೊಳಗೆ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಮುಂದಾಗಿದ್ದಾರೆ.
ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಅಂಬರೀಶ್ ಅವರ ಬಗ್ಗೆ ಎಲ್ಲಿಲ್ಲದ ಪ್ರೀತಿ. ಅಂಬರೀಶ್ ಅವರ ಹುಟ್ಟುಹಬ್ಬ ಮೇ. 29ರಂದು ಇಡೀ 100 ಮನೆಗಳಿರುವ ಗ್ರಾಮದಲ್ಲಿ ಅವರ ಹುಟ್ಟು ಹಬ್ಬ ಆಚರಿಸುತ್ತಿದ್ದರು. ತಳಿರು ತೋರಣಗಳಿಂದ ಸಿಂಗರಿಸಿ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅಂಬರೀಶ್ ಅವರೊಂದಿಗೆ ಅವಿನಾಭಾವ ಸಂಬಂಧವನ್ನು ವ್ಯಕ್ತಪಡಿಸುತ್ತಿದ್ದರು.
ಅಂಬಿ 2018ರ ನವೆಂಬರ್ 24ರಂದು ಇಹಲೋಕ ತ್ಯಜಿಸಿದಾಗ ನೆಚ್ಚಿನ ನಟನನ್ನು ಕಳೆದುಕೊಂಡು ಇಡೀ ಗ್ರಾಮ ದುಃಖದ ಮಡುವಿನಲ್ಲಿ ಮುಳುಗಿತ್ತು. ಅವರ ಚಿತಾಭಸ್ಮವನ್ನು ತಂದು ಒಂದು ವರ್ಷ ಕಾಲ ಕಚೇರಿಯಲ್ಲಿಟ್ಟು ಪೂಜೆ ಸಲ್ಲಿಸುತ್ತಿದ್ದರು. ಅಭಿಮಾನಿಗಳು ಸುಮಾರು 8 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿ ಅಂಬಿಗಾಗಿ ಗುಡಿಯನ್ನು ನಿರ್ಮಿಸಿದ್ದಾರೆ. ಅದರೊಳಗೆ ಕಂಚಿನ ಪ್ರತಿಮೆಯನ್ನೂ ಪ್ರತಿಷ್ಠಾಪಿಸಲಿದ್ದು, ನಾಳೆ ಗುಡಿಯ ಲೋಕಾರ್ಪಣೆ ಕಾರ್ಯ ನಡೆಯಲಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!