ನಾವೀಗ ಭಾರತದಲ್ಲಿದ್ದುಕೊಂಡೇ ಕೆಲಸ ಮಾಡಬೇಕಾಗಿದೆ ಅಮೆರಿಕ, ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದ ಕಾಲಾವಧಿಯೊಂದಿಗೆ!

0
176

ಪರಿಮಳಾ ಜಗ್ಗೇಶ್

ಬದುಕುವ ಕಲೆಯೆಂದರೆ  ಪರಿಪೂರ್ಣ ಬದುಕನ್ನು ಬಾಳಲು ಸಾಧ್ಯವಾದಷ್ಟು ಮಟ್ಟಿಗೆ ಸಮತೋಲನಕ್ಕೆ ಪ್ರಯತ್ನಿಸುವುದು ಹಾಗೂ ಅದನ್ನು ಸಾಧಿಸುವುದು. ಒಂದು ವೇಳೆ ನೀವು ಕೆರಿಯರ್‌ನಲ್ಲಿ ಯಶಸ್ಸಿನ ಅತ್ಯುನ್ನತ ಸ್ಥಾನ ತಲುಪಿದರೂ ಕುಟುಂಬವನ್ನು ಮತ್ತು ಸ್ನೇಹಿತರನ್ನು  ಮರೆತುದಾದರೆ  ನೀವು ಉನ್ನತ ಸ್ಥಾನದಲ್ಲಿದ್ದೂ ಏಕಾಂಗಿಯಾಗುತ್ತೀರಿ. ಇದೇವೇಳೆ, ನೀವು ನಿಮ್ಮ ಇಡೀ ಸಮಯ ಕೇವಲ ಕುಟುಂಬಕ್ಕೆ ಆದ್ಯತೆ ನೀಡಿದಲ್ಲಿ ಅವರ ಭಾವನಾತ್ಮಕ ಮತ್ತು ಆರ್ಥಿಕ ಆವಶ್ಯಕತೆಗಳನ್ನು ಪೂರೈಸುವುದು ಹೇಗೆ? ಇದು ನಿಜಕ್ಕೂ ಇಕ್ಕಟ್ಟಿನ ಪರಿಸ್ಥಿತಿ.
ಈಗಿನ ಅತ್ಯಂತ ಸ್ಪರ್ಧಾತ್ಮಕ ಮತ್ತು ಜಾಗತೀಕರಣದ ಜಗತ್ತಿನಲ್ಲಿ ವೃತ್ತಿ ಬದುಕು ಮತ್ತು ಕೌಟುಂಬಿಕ ಬದುಕಿನ ಮಧ್ಯದ ಸೀಮಾರೇಖೆ ಮಸುಕುಗೊಂಡಿದೆ. ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಕೆಲಸ ಮಾಡುವ ಕಾಲ ಹೋಗಿದೆ. ಕೈಗಾರಿಕೀಕರಣವು ಜಾಗತೀಕರಣ ಗೊಂಡಿರುವುದರಿಂದ ನಾವೀಗ ಭಾರತದಲ್ಲಿದ್ದುಕೊಂಡೇ ಅಮೆರಿಕ, ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದ ಕಾಲಾವಧಿಯೊಂದಿಗೆ ಕೆಲಸ ಮಾಡಬೇಕಾಗಿದೆ.
ನಾನು ಏನೇನು ಕಳಕೊಂಡಿದ್ದೇನೋ ಅದನ್ನೆಲ್ಲ ನಿವೃತ್ತಿಯಾದ ನಂತರ ಪಡಕೊಳ್ಳುತ್ತೇನೆ, ಆ ಬಳಿಕ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯುತ್ತೇನೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಲೆಕ್ಕ ಹಾಕುವಂತಿಲ್ಲ. ಏಕೆಂದರೆ ಬದುಕು ತುಂಬಾ ಸಣ್ಣದಾಗಿದೆ ಮತ್ತು ಅನಿಶ್ಚಿತತೆಯಿಂದಲೂ ಕೂಡಿದೆ. ನಿಮ್ಮ ರೈಲು ನಿಲ್ದಾಣ ಬಿಡುವ ಮೊದಲೇ ಅದನ್ನು ಹತ್ತಿ ಬಿಡಬೇಕು. ‘ಕಾರ್ಯ’ ಎಸಗಲು ‘ಈಗಲೇ’ ಎನ್ನುವುದೇ ಸೂಕ್ತ ಕಾಲ. ಯಾವುದೇ ನಿರ್ಧಾರ ತೆಗೆದುಕೊಳ್ಳಲೂ ‘ಈಗಲೇ ’ ಸಕಾಲ. ಆರೋಗ್ಯ ಎಂದಾಗ ಅದರರ್ಥ ಕೇವಲ ಕಾಯಿಲೆ ಇಲ್ಲದಿರುವುದು ಎಂದರ್ಥವಲ್ಲ. ಅದಕ್ಕಿಂತಲೂ ಮಿಗಿ ಲಾಗಿ ಒಬ್ಬಾತನ ಜೀವನಪಥವನ್ನು ಪವಿತ್ರಗೊಳಿಸಲು  ಮತ್ತು  ಪರಿಪೂರ್ಣಗೊಳಿಸಲು   ಬೇಕಾದ   ವಿವಿಧ  ಆಯಾಮಗಳಲ್ಲಿ ಸಮತೋಲನ ಸಾಧಿಸುವುದೂ ಆಗಿದೆ.  ಇದು ಕೇವಲ ದೈಹಿಕ ಆರೋಗ್ಯ, ಪೌಷ್ಠಿಕ ಆಹಾರ ಮತ್ತು ವ್ಯಾಯಾಮಕ್ಕೆ  ಸೀಮಿತವಲ್ಲ. ಇದು ಅದಕ್ಕಿಂತಲೂ ಮಿಗಿಲಾದ ವಿಷಯ.  ಬನ್ನಿ, ಆರೋಗ್ಯದ ಐದು ಆಯಾಮಗಳ ಕುರಿತಂತೆ ನೋಡೋಣ.
ದೈಹಿಕ ಆರೋಗ್ಯ
-ನಮ್ಮ ಪರಂಪರೆಯು ನಮ್ಮೊಂದಿಗೇ ಕಾಣೆಯಾಗ ದಿರಲಿ. ಆಧುನೀಕರಣವು ನಮ್ಮ ಹಿರಿಯರ ಪಾರಂಪರಿಕ ಆಹಾರ ಮತ್ತು ಸಂಸ್ಕೃತಿಯನ್ನು ಮರೆಸದಿರಲಿ. ಈ ಪರಂಪರೆಯನ್ನು  ನಿಮ್ಮ ಮಕ್ಕಳಿಗೂ ದಾಟಿಸಿ.
-ರಾತ್ರಿ ನಿಮಗೆ ಸುಖವಾದ ಮತ್ತು ಆರೋಗ್ಯಪೂರ್ಣ ನಿದ್ರೆ ಬರುವಂತಾಗಲು ಮಲಗುವುದಕ್ಕಿಂತ ಕನಿಷ್ಠ ಎರಡು ತಾಸು ಮುನ್ನ ಎಲ್ಲಾ ಬಗೆಯ ಸಾಮಾಜಿಕ ಮಾಧ್ಯಮಗಳಿಂದ ಮತ್ತು ಟಿವಿಯಿಂದ ದೂರವಿರಿ. ಸ್ಥಳೀಯವಾಗಿ ಲಭ್ಯವಿರುವ ಹಣ್ಣು ಮತ್ತು ತರಕಾರಿ ಸೇವನೆ, ಸಾಕಷ್ಟು ನೀರು ಕುಡಿಯುವುದು, ಪ್ರತಿನಿತ್ಯ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೆಂಬುದನ್ನು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡಬೇಕಿಲ್ಲ. ನಿಮಗೇ ಅದು ತಿಳಿದಿರುವುದೆ.
-ಪ್ರಯಾಣದ ವೇಳೆ ಸೀಟ್‌ಬೆಲ್ಟ್ ಧರಿಸುವುದು, ಹೆಲ್ಮೆಟ್ ಧರಿಸುವುದು, ಸಂಚಾರಿ ನಿಯಮಗಳನ್ನು ಪಾಲಿಸುವುದು ಹಾಗೂ ಆ ಮೂಲಕ ದೈಹಿಕ ಅಪಾಯ ವಾಗದಂತೆ ಮುಂಜಾಗ್ರತೆ ವಹಿಸುವುದು ಅತೀ ಮುಖ್ಯ. ನಾವು ಇನ್ನೂ ಬಹಳಷ್ಟು ಸಾಧಿಸಬೇಕಿದೆ. ಈ ಪ್ರಮಾದಗಳು ನಮ್ಮ ಕನಸು ಮತ್ತು ಗುರಿಯನ್ನು ಕಮರಿಸದಿರಲಿ.
-ನಿಮ್ಮ ದೇಹವು ನೀಡುವ ಸಂಕೇತಗಳನ್ನು ಅರಿತುಕೊಳ್ಳಿ. ಸಣ್ಣಪುಟ್ಟ ಕಾಯಿಲೆಗಳನ್ನು ತಕ್ಷಣವೇ ಗುರುತಿಸಿಕೊಂಡು ಅದನ್ನು ನಿವಾರಿಸಿಕೊಳ್ಳಿ. ಕೈಮೀರುವ ಮೊದಲೇ ಎಚ್ಚತ್ತುಕೊಳ್ಳಿ.
-ಆರೋಗ್ಯಕ್ಕೆ ಮಾರಕವಾದ ಕುಡಿತ, ಧೂಮಪಾನ, ಮಾದಕ ವಸ್ತು ಸೇವನೆಯಂತಹ ಚಟ ಬೆಳೆಸಿಕೊಳ್ಳದಿರಿ. ನಿಮ್ಮ ದೇಹವು ಒಂದು ದೇವಾಲಯದಂತೆ. ಅದನ್ನು ಗೌರವದಿಂದ ಕಾಣಿರಿ. ಹಾಗಾದಾಗ ಅದೂ ನಿಮ್ಮ ಕಾಳಜಿ ವಹಿಸುತ್ತದೆ.
ಧಾರ್ಮಿಕ ಆರೋಗ್ಯ
ಮಾನವನ ಅಸ್ತಿತ್ವದ ಉದ್ದೇಶವನ್ನು ಅರಿತುಕೊಂಡರೆ ಬದುಕಿನಲ್ಲಿ ಉನ್ನತ ಹಾಗೂ ಅರ್ಥಪೂರ್ಣ ಗುರಿಯನ್ನು ಇರಿಸಿಕೊಳ್ಳಲು ಸಾಧ್ಯ. ಇದನ್ನು ನಾವು ಬೇಗನೆ ಅರಿತುಕೊಂಡಷ್ಟೂ ಬದುಕು ಸರಾಗವಾಗುತ್ತದೆ.
-ಯಾವುದೇ ಕಾರ್ಯ ಮಾಡುವುದಿದ್ದರೂ ಉದಾತ್ತವಾಗಿರಲಿ. ಸಣ್ಣದಾದರೂ, ದೊಡ್ಡದಾದರೂ ಅದರಲ್ಲಿ ಪೂರ್ಣ ಶ್ರದ್ಧೆಯಿರಲಿ. ನಿಮ್ಮ ಹೆತ್ತವರ ಗೌರವಕ್ಕೆ ಕುಂದು ಬರುವಂತಹ ಕೆಲಸ ಎಂದೂ ಮಾಡದಿರಿ.
-ನಿಮ್ಮ ಹೃದಯದ ಮಾತಿಗೆ ಕಿವಿಗೊಡಿ. ನೀವು ನಂಬಿದ ತತ್ವಗಳೊಂದಿಗೆ ಬದುಕಿ.
-ಧ್ಯಾನವು ನಿಮ್ಮ ಬದುಕಿನ ಒಂದಂಗವಾಗಿರಲಿ. ಅದರಲ್ಲಿ ನೀವು ತಜ್ಞರೇ ಆಗಬೇಕೆಂದಿಲ್ಲ. ಸರಳವಾದ ಉಸಿರಾಟವೂ ಧ್ಯಾನಕ್ಕೆ ಸಾಕು.
-ಪ್ರೀತಿಯೆಂದರೆ ನಿರ್ಬಂಧಗಳಲ್ಲ. ಸ್ವತಃ ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಇಷ್ಟಪಟ್ಟುದನ್ನು ಮಾಡುವ ಸ್ವಾತಂತ್ರ್ಯವಿರಲಿ. ಇದು ನಿಮಗೆ ಮನೆಯಲ್ಲಿ ಮತ್ತು ವೃತ್ತಿ ಜಾಗದಲ್ಲಿ ಸಂತೋಷ ಮತ್ತು ಶಾಂತಿ ತರಬಲ್ಲುದು.
-ಬದುಕು ನಮಗೆ ನೀಡುವ ಪ್ರತಿಯೊಂದು ಸವಾಲೂ ನಾವು ಬೆಳೆಯಲು ಸಿಕ್ಕಿದ ಒಂದು ಅವಕಾಶ ಎಂದು ತಿಳಿಯಿರಿ.
ವೃತ್ತಿ ಆರೋಗ್ಯ
ನಿಷ್ಕ್ರಿಯ ವ್ಯಕ್ತಿಯ ಮನಸ್ಸು ಭೂತದ ಪ್ರಯೋಗಶಾಲೆ ಎಂಬ ಮಾತಿದೆ. ಸರಿಯಾದ ರೀತಿಯಲ್ಲಿ ಕೆಲಸದಲ್ಲಿ ತೊಡಗಿಕೊಳ್ಳುವುದು ನಮ್ಮ ಆರೋಗ್ಯಕ್ಕೆ ಕ್ಷೇಮ. ನಿಮಗೆ ಒಳ್ಳೆಯದು ಯಾವುದು ಎಂದು ಹೇಗೆ ತಿಳಿದುಕೊಳ್ಳುವಿರಿ? ನಿಮ್ಮ ವೃತ್ತಿಯಲ್ಲಿ ಹೇಗೆ ಯಶಸ್ಸು ಸಾಧಿಸುವಿರಿ ?
-ಪೂರ್ವಸಿದ್ಧತೆ ಮಾಡಿಕೊಳ್ಳುವುದೆಂದರೆ ಅರ್ಧ ಯುದ್ಧ ಗೆದ್ದಂತೆಯೆ. ನಿಮ್ಮ ಇಷ್ಟದ ವಿಷಯ ಯಾವುದು ಎಂಬುದನ್ನು ಗುರುತಿಸಿಕೊಳ್ಳಿ. ನಂತರದ ಹೆಜ್ಜೆಯೆಂದರೆ ಅದನ್ನು ಸಂತೋಷ, ಆರೋಗ್ಯ ಮತ್ತು ಸಂಪತ್ತು ಗಳಿಸುವ ರೀತಿಯಲ್ಲಿ ಬಳಸಿಕೊಳ್ಳುವುದು.
-ಕೆಲಸದ ಜಾಗದಲ್ಲಿ ನಿಮ್ಮ ವರ್ತನೆಯು ಕೆಲಸದಲ್ಲಿ ನಿಮ್ಮ ಸಂತೋಷವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉತ್ಸಾಹದಿಂದ ಮತ್ತು ಕೃತಜ್ಞತೆಯಿಂದ ಕೆಲಸಕ್ಕೆ ತೆರಳಿ. ಕಾರ್ಯನಿರತರಾದಾಗ ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಹಿತಾಸಕ್ತಿ ಕಾಯುಕೊಳ್ಳುತ್ತಿದ್ದೀರಿ ಎಂಬ ಭಾವ ನಿಮ್ಮಲ್ಲಿರಲಿ.
-ಯಶಸ್ಸಿಗೆ ದೂರದೃಷ್ಟಿ ಕೂಡ ಅಗತ್ಯ. ನಿಮಗೊಂದು ಗುರಿಯಿಟ್ಟುಕೊಳ್ಳಿ. ಅದರಲ್ಲಿ ಪೂರ್ಣ ನಂಬಿಕೆಯಿಡಿ. ಜಗತ್ತು ನಿಮಗೆ ಅವಕಾಶದ ಬಾಗಿಲು ತೆರೆಯುತ್ತದೆ.
-ಜೀವನದುದ್ದಕ್ಕೂ ಕಲಿಯುವುದನ್ನು, ಶಿಕ್ಷಣ ಪಡೆಯು ವುದನ್ನು, ಸುಧಾರಣೆಗೆ ಮುಕ್ತವಾಗಿರುವುದನ್ನು  ನಿಲ್ಲಿಸ ಬೇಡಿ. ತಂತ್ರಜ್ಞಾನದ ಬದಲಾವಣೆಗಳೊಂದಿಗೆ ನೀವೂ ಜತೆಯಾಗಿ ಸಾಗಿ. ಈ ವಿಷಯದಲ್ಲಿ ಹಿಂದೆ ಬೀಳಬೇಡಿ.
ಪರಿಸರ ಆರೋಗ್ಯ
ನಮ್ಮ ಮುಂದಿನ ಪೀಳಿಗೆಗೆ ಶಿಕ್ಷಣ ಮತ್ತು ಸ್ಥಿರತೆ ನೀಡುವುದರ ಜತೆಗೇ ಪರಿಸರ ಕಾಯ್ದುಕೊಳ್ಳುವ ನಿಟ್ಟಿನಲ್ಲೂ ನಮ್ಮಲ್ಲಿ ದೊಡ್ಡ ಹೊಣೆಗಾರಿಕೆಯಿದೆ. ಪ್ರಕೃತಿ ಮಾತೆಯನ್ನು ಸಂರಕ್ಷಿಸುವ ಕುರಿತಂತೆ ನಾವು ಮಕ್ಕಳಿಗೆ ಹೇಳಿ ಕೊಡಬೇಕಾಗಿದೆ.
-ನೀರಿನ ಪ್ರತಿಯೊಂದು ಬಿಂದುವೂ ಮಹತ್ವದ್ದೆ. ನೀರಿನ ಸಂರಕ್ಷಣೆ ಮತ್ತು ಮಿತಬಳಕೆ ನಮ್ಮ ಜೀವನದ ಅಂಗವಾಗಿರಲಿ.
-ಮರಗಳು ಹಸಿರು ಭೂಮಿಯ ಜೀವಾಳ. ಮರಗಳನ್ನು ನೆಟ್ಟು ಬೆಳೆಸುವ ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳಬೇಕು. ಪ್ರತಿಯೊಂದು ಕುಟುಂಬವೂ ಒಂದು ಮರ ಬೆಳೆಸಿದರೆ ಹತ್ತು ವರ್ಷಗಳಲ್ಲಿ ಭೂಮಿ ಹೇಗಿದ್ದೀತು ಯೋಚಿಸಿ.
-ಪ್ರತಿಯೊಂದು ವಸ್ತುವಿನ ಕಡಿಮೆ ಬಳಕೆ ಮತ್ತು ಮರುಬಳಕೆ ನಮ್ಮ ಮಂತ್ರವಾಗಿರಲಿ.
-ಮಳೆ ನೀರು ಕೊಯ್ಲು ಈಗ ಅತ್ಯಗತ್ಯವಾಗಿದೆ. ಅದನ್ನು ಎಲ್ಲರೂ ಅನುಸರಿಸೋಣ.
-ಸಾವಯವಕ್ಕೆ ಆದ್ಯತೆ ಕೊಡಿ. ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಕಡಿಮೆಯಾಗಲಿ.
ಸಾಮಾಜಿಕ ಆರೋಗ್ಯ ಮನುಷ್ಯ ಸಾಮಾಜಿಕ ಜೀವಿ. ಸಾಮಾಜಿಕ ಕ್ಷೇಮ ವನ್ನು ಅರ್ಥ ಮಾಡಿಕೊಳ್ಳುವುದರಿಂದ ಮತ್ತು ಈ ನಿಟ್ಟಿನಲ್ಲಿ ವ್ಯವಹರಿಸುವುದರಿಂದ ಒಬ್ಬಾತನ  ಬದುಕು ಸುಂದರವಾಗುತ್ತದೆ.  ಈ ಜಗತ್ತಿಗೆ ನಾವು ಕೂಡ ಸಂಪತ್ತಾಗಬೇಕು.
-ಒಳ್ಳೆಯವರಾಗಿರಿ. ನಮ್ಮ ಕುಟುಂಬ , ಸ್ನೇಹಿತರು ಮತ್ತು ಸಹೋದ್ಯೋಗಿಗಳ ಕುರಿತಂತೆ ಪ್ರೀತಿ, ಕರುಣೆ, ಪ್ರಾಮಾಣಿಕತೆ, ಗೌರವ ಮತ್ತು ವಿಶ್ವಾಸವಿರಲಿ.
-ನೀವಿರುವ ಜಾಗದಲ್ಲಿ ಆರೋಗ್ಯಪೂರ್ಣ ಸಂಬಂಧ ಬೆಳೆಸಿಕೊಳ್ಳಿ.
-ನಿಮ್ಮ ಉತ್ತಮ ಗುಣಗಳಾವುವು ಎಂಬುದನ್ನು ಗುರುತು ಮಾಡಿಕೊಂಡು ಅವನ್ನು ಸಮಾಜಕ್ಕೆ ಕೊಡುಗೆ ನೀಡಿ. ನಿಮ್ಮ ನಿರ್ಧಾರಗಳೆಲ್ಲವೂ ಹಣ ಗಳಿಸುವ ಗುರಿ ಹೊಂದದಿರಲಿ. ಇತರರಿಗೂ ಪ್ರಾಮಾಣಿಕವಾಗಿ ಕೊಡುಗೆ ನೀಡಿ. ಹಾಗೆ ಮಾಡಿದಲ್ಲಿ ಸಹಜವಾಗಿಯೇ ನಿಮಗೆ ಹೆಸರು ಮತ್ತು ಪ್ರಸಿದ್ಧಿ ದೊರಕುವುದು.
-ಇತರರ ಜತೆ ಉತ್ತಮ ಸಂವಹನ ಸಾಧಿಸಿ. ಇದರಿಂದ ವಾತ್ಸಲ್ಯಪೂರ್ಣ ಜನರ ಜಾಲವು ಬೆಳೆಯುವುದು.
-ನೀವು ಗತಿಸಿದಾಗ ಎಷ್ಟು ಸಂಪತ್ತನ್ನು ಬಿಟ್ಟು ಹೋಗಿದ್ದೀರಿ ಎಂಬುದಕ್ಕಿಂತಲೂ ಸಮಾಜಕ್ಕೆ ನೀವು ಏನು ಕೊಟ್ಟು ಹೋಗಿದ್ದೀರಿ ಎಂಬುದರ ಕುರಿತಂತೆ ಯೋಚಿಸಿ.
ಇವು ಆರೋಗ್ಯಪೂರ್ಣ ಬದುಕಿನ ಸರಳವಾದ ಐದು ಆಯಾಮಗಳು. ಈ ಕುರಿತು ನೀವೇ ಉತ್ತಮ ತೀರ್ಪುಗಾರರು. ನಿಮ್ಮ ಬಲಿಷ್ಠತೆ ಎಲ್ಲಿ ಇರುವುದು, ನೀವು ಕಾರ್ಯವೆಸಗಬೇಕಾದ ಕ್ಷೇತ್ರ ಯಾವುದು ಎಂದು ನಿರ್ಧರಿಸಿಕೊಳ್ಳಿ. ಬಳಿಕ ಕಾರ್ಯರೂಪಕ್ಕೆ ಇಳಿಯಿರಿ. ನೆನಪಿರಲಿ, ಬದುಕು ತುಂಬಾ ಸಣ್ಣದಾಗಿದೆ. ಹಾಗಾಗಿ ‘ಸಮತೋಲಿತ ಬದುಕಿನ ಕಲೆ ’ ಅರಿಯಿರಿ.

LEAVE A REPLY

Please enter your comment!
Please enter your name here