ಹೊಸದಿಗಂತ ವರದಿ,ಬಳ್ಳಾರಿ:
ಬಿಜೆಪಿ ತತ್ವ ಸಿದ್ದಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾದ ನಾವು 17 ಜನರು ಮುತ್ತುಗಳಿದ್ದಂತೆ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಗುರುವಾರ ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನುಡಿದಂತೆ ನಡೆದಿದ್ದಾರೆ. ಅದರಲ್ಲೂ ವಿಜಯನಗರ ನೂತನ ಜಿಲ್ಲೆ ರಚನೆಗೆ ಅಸ್ತು ಎಂದು ದಾಖಲೆ ಸೃಷ್ಟಿಸಿದ್ದಾರೆ, ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ, ಸಂಪುಟದ ಎಲ್ಲ ಸಚಿವರೂ ಕಾಲಿಗೆ ಚಕ್ರಕಟ್ಟಿಕೊಂಡು ಪ್ರವಾಸ ಹಮ್ಮಿಕೊಂಡಿದ್ದಾರೆ, ನಾನು ಪ್ರವಾಸ ಮಾಡಿ ಅಭಿವೃದ್ದೀ ಕೆಲಸಗಳನ್ನು ಕೈಗೊಂಡಿರುವೆ. ಆದರೆ, ಉಳಿದ ಸಚಿವರಿಗೆ ಹೋಲಿಕೆ ಮಾಡಿದರೆ ನಾನು ಸ್ವಲ್ಪ ಹಿಂದೆ ಇರುವೆ ಎಂದು ತಿಳಿಸಿದರು.
ಪಶ್ಚಿಮ ತಾಲೂಕುಗಳ ಜನರ ಸುಮಾರು ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಡೇರಿಸಿದ್ದು, ಕ್ಷೇತ್ರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಕೆಲವರು ನೂತನ ಜಿಲ್ಲೆ ರಚನೆಗೆ ವಿರೋದಿಸುತ್ತಿದ್ದು, ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುವೆ, ಯಾರನ್ನೂ ನಿರ್ಲಕ್ಷಿಸುವ ಮಾತೇ ಇಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ, ಕೃಷಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಇತರರಿದ್ದರು.