Thursday, August 11, 2022

Latest Posts

ನಿಟ್ಟೆ, ಮಣಿಪಾಲ, ಮಂಗಳೂರು ವಿ.ವಿ ಸಹಯೋಗದಲ್ಲಿ ಆನ್‌ಲೈನ್‌ನಲ್ಲಿ ತುಳುದಿನ ಆಚರಣೆ

ಮಂಗಳೂರು: ತುಳುವರಾಗಿ ನಮ್ಮ ತಾಯಿ, ತಾಯ್ನುಡಿಯನ್ನು ಯಾರೂ ಮರೆಯಬಾರದು. ಹೊಸ ತಲೆಮಾರಿನವರು ತುಳು ಭಾಷೆಯನ್ನು ಪ್ರೀತಿಸಿ ಮುಂದುವರಿಸಬೇಕು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಾಧಿಪತಿ ನಿಟ್ಟೆ ವಿನಯ ಹೆಗ್ಡೆ ಕಿವಿಮಾತು ಹೇಳಿದ್ದಾರೆ.
ಶುಕ್ರವಾರ ಆನ್‌ಲೈನ್ ಮೂಲಕ ಆಚರಿಸಲಾದ ತುಳು ದಿನದ ಅಧ್ಯಕ್ಷತೆಯನ್ನು ಅವರು ಮಾತನಾಡುತ್ತಿದ್ದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ, ಮಣಿಪಾಲ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ಜಂಟಿ ಸಹಯೋಗದಲ್ಲಿ ತುಳು ದಿನವನ್ನು ಆಯೋಜಿಸಲಾಗಿತ್ತು. ವಿಶ್ವದ ವಿವಿಧ ತುಳು ಸಂಘಟನೆಗಳ ಬೆಂಬಲದೊಂದಿಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯು ಮಣಿಪಾಲ, ಮಂಗಳೂರು ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಏಕಕಾಲದಲ್ಲಿ ನಡೆಯಿತು. ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟನಾ ಭಾಷಣ ಮಾಡಿ ಕಯ್ಯಾರರ ‘ಕನ್ನಡಾಂತರ್ಗತ ತುಳುನಾಡು’ವನ್ನು ಉಲ್ಲೇಖಿಸಿ, ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿ ಕಲಿಕೆ ಬಹಳ ಉತ್ತಮ ವಿಷಯವೆಂದರು.
ಊರ-ಪರವೂರ ತುಳು ಸಂಘಟನೆಗಳ ಪ್ರಸ್ತುತಿಯಿರುವ ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ|ಪಿ.ಎಸ್.ಯಡಪಡಿತ್ತಾಯರು ಉದ್ಘಾಟಿಸಿ ‘ತುಳುವಿನ ಬೆಳವಣಿಗೆಗೆ ಮಂಗಳೂರು ವಿಶ್ವವಿದ್ಯಾನಿಲಯ ಹಿಂದೆಯೂ ಬೆಂಬಲ ನೀಡಿದೆ, ಮುಂದೆಯೂ ಬೆಂಬಲ ನೀಡಲಿದೆ ಎಂದರು.
ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಡಿ.ವೆಂಕಟೇಶ್ ‘ತುಳುವ’ ಸಂಶೋಧನಾ ಪತ್ರಿಕೆಯ ಹೊಸ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಿಟ್ಟೆ ವಿಶ್ವವಿದ್ಯಾನಿಲಯದಿಂದ ಪ್ರಕಾಶಿತ, ಪ್ರದ್ಯೋತ್ ಹೆಗ್ಡೆಯವರಿಂದ ರಚಿತವಾದ ಪುಸ್ತಕವನ್ನು ಕುಲಪತಿ ಡಾ.ಸತೀಶ್‌ಕುಮಾರ್ ಭಂಡಾರಿ ಬಿಡುಗಡೆ ಮಾಡಿದರು.
ಮೂರು ವಿದ್ಯಾನಿಲಯಗಳು ಸೇರಿದಂತೆ ತುಳುವರು ಒಟ್ಟುಸೇರಿ ದುಡಿದರೆ ಎಂಟನೆ ಪರಿಚ್ಛೇದಕ್ಕೆ ತುಳು ಭಾಷೆ ಸೇರುಲು ಸಹಕಾರಿಯಾಗಬಹುದು ಎಂದು ಡಾ.ಸತೀಶ್‌ಕುಮಾರ್ ಭಂಡಾರಿ ಹೇಳಿದರು. ಪುಸ್ತಕದ ಕುರಿತಾಗಿ ಡಾ.ಗುರುಪ್ರಸಾದ್ ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ.ಎಂ.ಎಸ್ ಮೂಡಿತ್ತಾಯ ಸ್ವಾಗತಿಸಿದರು, ಮಂಗಳೂರು ವಿಶ್ವವಿದ್ಯಾನಿಲಯದ ತುಳುಪೀಠದ ಸಂಯೋಜಕ ಡಾ|ಮಾಧವ ಎಂ.ಕೆ. ವಂದಿಸಿದರು. ಡಾ|ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ತುಳು ಅಧ್ಯಯನದಲ್ಲಿ ನಿರತವಾಗಿರುವ ಸಂಸ್ಥೆಗಳು, ಸ್ಥಳೀಯ, ದೇಶ ಮತ್ತು ವಿದೇಶಗಳಲ್ಲಿರುವ ಮೂವತ್ತೈದಕ್ಕೂ ಹೆಚ್ಚು ತುಳು ಸಂಘಟನೆಗಳ ಕಾರ್ಯನಿರ್ವಹಣೆಯ ಕುರಿತು ದೃಶ್ಯಪ್ರಸ್ತುತಿ ನಡೆಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss