ಹೊಸದಿಗಂತ ವರದಿ, ಕೊಡಗು:
ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದ ವ್ಯಕ್ತಿಯೊಬ್ಬರು ಅಚ್ಚರಿಯಾಗಿ ಬದುಕುಳಿದ ಘಟನೆ ಸಿದ್ದಾಪುರದ ಕರಡಿಗೋಡು ಸಮೀಪ ಬೆಳಗ್ಗೆ ನಡೆದಿದೆ.
ಕರಡಿಗೋಡು ಸಮೀಪದ ಅಂಗನವಾಡಿ ಶಿಕ್ಷಕಿ ಸರಸು ಎಂಬವರ ಪತಿ ಕೃಷ್ಣ (55) ಎಂಬವರು ಬೆಳಗಿನ ಜಾವ ಅಂದಾಜು 5.45ರ ಸಮಯಕ್ಕೆ ನಿದ್ರೆಯಿಂದ ಎದ್ದು ಮನೆಯ ಮುಂಭಾಗಕ್ಕೆ ಬಂದಿದ್ದು, ಈ ಸಂದರ್ಭ ಮನೆಯ ಮುಂಭಾಗದಲ್ಲಿದ್ದ ತೆರೆದ ಬಾವಿಗೆ ಕಾಲು ಜಾರಿ ಬಿದ್ದಿದ್ದಾರೆ.
ನಂತರ ಹುಡುಕಾಡಿದಾಗ ಮನೆಯ ಮುಂಭಾಗದ ಬಾವಿಯ ಒಳಗಿನಿಂದ ಕೂಗುವ ಸದ್ದು ಕೇಳಿ ಬಂದಿತು. ಕೂಡಲೇ ಸರಸು ಅವರು ಅಕ್ಕಪಕ್ಕದ ನಿವಾಸಿಗಳನ್ನು ಕರೆದು ಬಾವಿಯಲ್ಲಿ ಬಿದ್ದಿರುವ ತನ್ನ ಪತಿಯನ್ನು ರಕ್ಷಣೆ ಮಾಡಲು ಸ್ಥಳೀಯರೊಂದಿಗೆ ಸೇರಿ ಪ್ರಯತ್ನಿಸಿದರು.
ಆದರೆ ಸುಮಾರು 30 ರಿಂದ 40 ಅಡಿಗಳ ಆಳದಷ್ಟು ಇರುವ ಬಾವಿಯ ಒಳಗಿನಿಂದ ಕೃಷ್ಣ ಅವರನ್ನು ಮೇಲಕ್ಕೆತ್ತಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ.
ಹಗ್ಗಗಳನ್ನು ಬಳಸಿ ಪ್ರಯತ್ನಿಸಿದರೂ ಕೃಷ್ಣರವರು ಬಾವಿಯೊಳಗಿನಿಂದ ಬರಲು ಕಷ್ಟಕರವಾಗಿತ್ತು. ನಂತರ ಗೋಣಿಕೊಪ್ಪಲಿನ ಅಗ್ನಿಶಾಮಕದಳದ ಸಿಬ್ಬಂದಿಗಳು ವಾಹನದಲ್ಲಿ ಆಗಮಿಸಿ ಸತತ 3 ಗಂಟೆಗಳ ಕಾರ್ಯಾಚರಣೆ ನಡೆಸಿ ಬಾವಿಯೊಳಗಿದ್ದ ಕೃಷ್ಣ ಅವರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಬಾವಿಯೊಳಗೆ ಬಿದ್ದಿದ್ದ ಕೃಷ್ಣ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು.
ಸ್ಥಳಕ್ಕೆ ಸಿದ್ದಾಪುರದ ಸಹಾಯಕ ಠಾಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿ ಭರತ್ ಭೇಟಿ ನೀಡಿ ಕಾರ್ಯಾಚರಣೆಗೆ ಸಹಕರಿಸಿದರು. ಅಲ್ಲದ ಸ್ಥಳೀಯರು ಕೂಡ ವಿಚಾರ ತಿಳಿದು ಧಾವಿಸಿ ಬಂದು ಎಲ್ಲಾ ರೀತಿಯಲ್ಲಿ ಕಾರ್ಯಾಚರಣೆಗೆ ಸಹಕಾರ ನೀಡಿದರು.