Wednesday, July 6, 2022

Latest Posts

ನಿಧಿ ಸಂಗ್ರಹ ಸಂದರ್ಭ ಪಕ್ಷ-ಸಂಘಟನೆ ಧ್ವಜ ಬಳಕೆ ಸಲ್ಲದು: ವೀಣಾ ಅಚ್ಚಯ್ಯ ಅಭಿಮತ

ಹೊಸ ದಿಗಂತ ವರದಿ, ಮಡಿಕೇರಿ: 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ, ಕಾಂಗ್ರೆಸ್ ಕೂಡ ಇದನ್ನು ಸ್ವಾಗತಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಹಿಂದೂ ರಾಷ್ಟ್ರವಾಗಿದ್ದು, ನಾವೆಲ್ಲರೂ ಹಿಂದೂಗಳೇ ಆಗಿದ್ದೇವೆ. ಆದರೆ ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಕ್ಕೆ ಇಳಿದಿರುವವರು ಆರ್‍ಎಸ್‍ಎಸ್ ಮತ್ತು ಬಿಜೆಪಿ ಧ್ವಜವನ್ನು ಬಳಸುತ್ತಿರುವುದು ಸರಿಯಾದ ಕ್ರಮವಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕೆ ಹೊರತು ಅದು ಬಿಜೆಪಿ ಮಂದಿರವಾಗಬಾರದು ಎಂದು ನುಡಿದರು.
ಜ.20ರಂದು ರಾಜಭವನ ಮುತ್ತಿಗೆ : ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಜ.20 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಹೋರಾಟ ನಡೆಯಲಿದೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆ ಮತ್ತು ರಾಜ್ಯ ಸರ್ಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಪ್ರತಿಭಟನೆಯ ಸಂದರ್ಭ ವಿರೋಧಿಸಲಾಗುವುದೆಂದರು.
ಕಳೆದ 44 ದಿನಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಮಾತುಕತೆಯ ನಾಟಕವನ್ನಷ್ಟೇ ಆಡುತ್ತಿದೆ ಎಂದು ಅವರು ಆರೋಪಿಸಿದರು.
ಕೃಷಿ ತಿದ್ದುಪಡಿ ಕಾಯ್ದೆಯಿಂದ ಕೃಷಿ ಭೂಮಿ ಬಂಡವಾಳಶಾಹಿಗಳ ಪಾಲಾಗುತ್ತಿದ್ದು, ರೈತರು ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಅದೇ ಭೂಮಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ರೈತರಿಗೆ ಬೆಂಬಲ ಬೆಲೆ ಮತ್ತು ಸಬ್ಸಿಡಿ ಸಿಗದ ಪರಿಸ್ಥಿತಿ ನಿರ್ಮಾಣವಾಗಬಹುದು. ಅಕ್ಕಿಯ ಬೆಲೆ ಕೆ.ಜಿ ಗೆ ನೂರು ರೂ. ದಾಟಬಹುದು. ಅಲ್ಲದೆ ಪಡಿತರ ವ್ಯವಸ್ಥೆಯೂ ಇಲ್ಲದಂತಾಗಬಹುದು ಎಂದು ಮುತ್ತಪ್ಪ ಆತಂಕ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ತೈಲೋತ್ಪನ್ನಗಳ ಬೆಲೆ ಹೆಚ್ಚಳವನ್ನು ವಿರೋಧಿಸಿದರು. ಬಿಜೆಪಿ ಆಡಳಿತ ವ್ಯವಸ್ಥೆ ಇರುವಲ್ಲಿ ಅಧಿಕಾರ ದುರುಪಯೋಗವಾಗುತ್ತಿದೆ ಎಂದು ಟೀಕಿಸಿದ ಅವರು, ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ಮಾತ್ರ ನೆರವು ನೀಡಿದರೆ ಸಾಲದು, ಎಲ್ಲಾ ರಾಜ್ಯಗಳಿಗೂ ಕೇಂದ್ರದ ಸಹಾಯ ಸಿಗಬೇಕೆಂದು ಒತ್ತಾಯಿಸಿದರು.
ಸಂವಿಧಾನವನ್ನು ಬದಲಾಯಿಸುವ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ ಬಿ.ಎ.ಜೀವಿಜಯ ಅವರು, ಇಂದಿನ ಪರಿಸ್ಥಿತಿಯಲ್ಲಿ ದೇಶವನ್ನು ಕಾಪಾಡಲು ಆ ಭಗವಂತನಿಂದಲೂ ಸಾಧ್ಯವಿಲ್ಲ ಎಂದರು.
ಊರಿನ ದೇವಾಲಯಗಳನ್ನು ಮೊದಲು ಸರಿಪಡಿಸಿ ನಂತರ ರಾಮಮಂದಿರ ನಿರ್ಮಿಸಲಿ ಎಂದೂ ಅವರು ತಿಳಿಸಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಜ.20 ರಂದು ನಡೆಯುವ ರಾಜಭವನ ಮುತ್ತಿಗೆ ಪ್ರತಿಭಟನೆಯಲ್ಲಿ ಕೊಡಗಿನ ಮೂರು ತಾಲೂಕುಗಳ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss