ಹೊಸ ದಿಗಂತ ಆನ್ ಲೈನ್ ಡೆಸ್ಕ್
ಪ್ರಾಕೃತಿಕವಾಗಿ ಬೆಳೆಯುವ ಹಲಸಿನ ಕಾಯಿ, ಜೀಗುಜ್ಜೆಯಂತೆ ಇದೂ ಒಂದು ಮರದಲ್ಲಿ ಬೆಳೆಯುವ ಕಾಯಿಯಾಗಿದೆ. ಸಸ್ಯಶಾಸ್ತ್ರೀಯ ಹೆಸರು ಆರ್ಟೋಕೋರ್ಪಸ್ ಕಮಾನ್ಸಿ ಎಂದು ಕರೆಯಲ್ಪಡುವ ಇದರಲ್ಲಿ ವರ್ಷಪೂರ್ತಿ ಕಾಯಿಗಳು ಬಿಡುತ್ತಿರುತ್ತವೆ. ಗಂಡು ಹಾಗೂ ಹೆಣ್ಣು ಹೂವುಗಳು ಒಂದೇ ಮರದಲ್ಲಿ ಬೆಳೆಯುತ್ತದೆ.
ಬಾಲದ ಆಕಾರದಲ್ಲಿ ಗಂಡು ಹೂವಿದ್ದರೆ ಹೆಣ್ಣು ಹೂ ದುಂಡನೆಯಾಕಾರದಲ್ಲಿರುತ್ತದೆ. ಎಳೆಯ ಹಲಸಿನ ಕಾಯಿಯಂತೆ ಇದರ ಕಾಯಿಗಳಲ್ಲಿ ಬೀಜಗಳಿರುತ್ತವೆ. ಹೆಸರೇ ಹೇಳುವಂತೆ (ನೀರುಕುಜುವೆ) ಇದರ ಪಲ್ಯ ಹಲಸಿನ ಕುಜುವೆ ಪಲ್ಯದಂತೆಯೇ ರುಚಿಯಾಗಿದೆ. ದೀಗುಜ್ಜೆಯ ಮರದಂತೆ ಕಾಣುವ ಈ ಮರ ಸಾಮಾನ್ಯ ಎತ್ತರ ಬೆಳೆಯುತ್ತದೆ. ಬೆಳೆದು ಹಣ್ಣಾದ ಕಾಯಿಗಳ ಬೀಜಗಳಿಂದ ಗಿಡಗಳನ್ನು ಬೆಳೆಸಬಹುದಾಗಿದೆ. ಎಳೆಯ ಕಾಯಿ ಇರುವಾಗಲೇ ಪಲ್ಯ, ಸಾಂಬಾರು, ಗಸಿ ಮುಂತಾದವುಗಳನ್ನು ಮಾಡುತ್ತಾರೆ. ಬೇಳೆಗಳನ್ನು ಪದಾರ್ಥಗಳಿಗೆ ಉಪಯೋಗಿಸಬಹುದಾಗಿದೆ. ಬಲಿತಕಾಯಿ ತರಕಾರಿಯಾಗಿ ಉಪಯೋಗಿಸಲು ಕಷ್ಟವಾಗುವುದು. ಕಾಯಿಗಳಲ್ಲಿ ಮಯಣ ಇರುವ ಕಾರಣ ತುಂಡರಿಸಿದ ನೀರುಕುಜುವೆ ತುಂಡುಗಳನ್ನು ನೀರಿನಲ್ಲಿ ಅರ್ಧ ತಾಸು ನೆನೆಸಿ ಚೊಗರು ನೀರು ತೆಗೆದು ಉಪಯೋಗಿಸಬೇಕು.
ಬಲು ಅಪರೂಪದ ನೀರುಕುಜುವೆ ಗಿಡಗಳು ಕುದ್ದುಪದವು ಬೆರಿಪದವು ಸಮೀಪದ ಮುಳಿಯ ವೆಂಕಟಕೃಷ್ಣ ಶರ್ಮರ ಬಳಿಯಿದೆ.
ಆಸಕ್ತರಿಗೆ ಅವರು ಗಿಡಗಳನ್ನೂ ನೀಡಲಿದ್ದಾರೆ. ಸಂಪರ್ಕ : 9480200832 (ರಾತ್ರಿ 8ರಿಂದ 9).