ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಾಹನ ಸವಾರರ ಹಿತ ದೃಷ್ಟಿಯಿಂದ ಸಂಚಾರಿ ನಿಯಮ ಪಾಲನೆ ಮಾಡದವರಿಗೆ ಸರ್ಕಾರ ಈಗಾಗಲೇ ದೊಡ್ಡ ಮಟ್ಟದ ದಂಡ ವಿಧಿಸುತ್ತಿದ್ದು, ಇದೀಗ ವಾಹನ ಸವಾರರಿಗೆ ಸಂಬಂಧಿಸಿದಂತೆ ಮತ್ತೊಂದು ನಿಯಮ ಜಾರಿಯಾಗಿದೆ. ಈ ಹೊಸ ನಿಯಮದ ಅನುಸಾರ ಬೈಕ್ನಲ್ಲಿ ಸೈಡ್ ಮಿರರ್ ಇರದಿದ್ದರೆ 500 ರೂ ಮತ್ತು ಕಾರಿನಲ್ಲಿ ಹಿಂಬದಿ ಕುಳಿತವರು ಸೀಟ್ ಬೆಲ್ಟ್ ಧರಿಸದಿದ್ದರೆ 1000 ರೂ. ದಂಡ ತೆರಬೇಕಾಗುತ್ತದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದಿಂದಲೇ ಈ ನಿಯಮ ಜಾರಿಯಾಗಿದ್ದು, ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಇದನ್ನು ಕಟ್ಟುನಿಟ್ಟಾಗಿ ಅಳವಡಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಹೇಳಿದ್ದಾರೆ.
“ಈ ನಿಯಮಗಳನ್ನೇನು ಹೊಸದಾಗಿ ರೂಪುಗೊಂಡಿಲ್ಲ. ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರೀಯ ಮೋಟಾರು ವಾಹನ ಕಾಯ್ದೆ 1989 ಎರಡರಲ್ಲೂ ಈ ನಿಯಮಗಳನ್ನ ಉಲ್ಲೇಖಿಸಲಾಗಿದೆ. ಆದರೆ, ಅವುಗಳ ಪಾಲನೆಯಾಗುತ್ತಿಲ್ಲ. ಇನ್ನು ಮುಂದೆ ಈ ನಿಯಮಗಳ ಪಾಲನೆ ಕಡ್ಡಾಯ. ನಿಯಮ ಉಲ್ಲಂಘಿಸುವವರು ದಂಡ ತೆರಬೇಕಾಗುತ್ತದೆ” ಎಂದು ದೆಹಲಿ ಸಂಚಾರ ಪೊಲೀಸರು, ಅಧಿಕೃತ ಹೇಳಿಕೆ ನೀಡಿದ್ದಾರೆ.