ಮೈಸೂರು: ಇಲಾಖೆಯ ಮೇಲಾಧಿಕಾರಿಗಳು ನೀಡುತ್ತಿದ್ದ ಕಿರುಕುಳ ಹಾಗೂ ನಿರಂತರವಾದ ಕೆಲಸದ ಒತ್ತಡದಿಂದ ಬೇಸತ್ತು ತಾಲೂಕು ಆರೋಗ್ಯಾಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಆಲನಹಳ್ಳಿಯಲ್ಲಿ ಗುರುವಾರ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಂದ್ರ (೪೩) ಆತ್ಮಹತ್ಯೆ ಮಾಡಿಕೊಂಡವರು. ಮೈಸೂರು ನಗರದ ಆಲನಹಳ್ಳಿ ಲೇ ಔಟ್ ನಲ್ಲಿರುವ ತಮ್ಮ ನಿವಾಸದಲ್ಲಿ ವಾಸ ಮಾಡುತ್ತಿದ್ದ ಇವರು, ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಂದ್ರ, ಕೋವಿಡ್ ೧೯ ಸಂದರ್ಭದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ಕೆಲಸದ ಒತ್ತಡದ ಕುರಿತು ಕುಟುಂಬದವರೊಡನೆ ಅಳಲು ತೋಡಿಕೊಂಡಿದ್ದರು. ಅಲ್ಲದೆ ಹಬ್ಬದ ದಿನವೂ ಕೆಲಸಕ್ಕೆ ಹೋಗಬೇಕು ಎಂದು ಕುಟುಂಬದವರೊಡನೆ ಬೇಸರ ವ್ಯಕ್ತಪಡಿಸಿದ್ದರು. ಇಲಾಖೆಯ ಮೇಲಾಧಿಕಾರಿಗಳಿಂದ ಆಗುತ್ತಿದ್ದ ಕಿರುಕುಳದ ಬಗ್ಗೆಯೂ ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ.
ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಹಾಗೂ ೧೦ ವರ್ಷದ ಮಗಳನ್ನು ಅಗಲಿದ್ದಾರೆ.