ಹೊಸದಿಗಂತ ವರದಿ, ಶಿವಮೊಗ್ಗ:
ನಿರ್ಮಾಣ ಉದ್ಯಮದ ಸಿಮೆಂಟ್, ಕಬ್ಬಿಣ ಹಾಗೂ ಇತರೆ ಸಾಮಗ್ರಿಗಳ ಅವೈಜ್ಞಾನಿಕ ಬೆಲೆ ಏರಿಕೆ ಖಂಡಿಸಿ ಫೆ.12 ರಂದು ನಿರ್ಮಾಣ ಕಾಮಗಾರಿ ಸಂಪೂರ್ಣ ಸ್ಥಗಿತಗೊಳಿಸಿ ಸಾಂಕೇತಿಕ ಧರಣಿ ನಡೆಸಲಾಗುತ್ತದೆ ಎಂದು ಬಿಲ್ಡರ್ಸ್ ಅಸೋಸಿಯೇಶನ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಪಿ. ಸುಬ್ರಮಣಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತತೀಚಿನ ದಿನಗಳಲ್ಲಿ ನಿರ್ಮಾಣ ಸಾಮಗ್ರಿಗಳ ಬೆಲೆ ಅ ವೈಜ್ಞಾನಿಕವಾಗಿ ಹೆಚ್ಚಳ ಮಾಡುತ್ತಿರುವುದರಿಂದಾಗಿ ನಿರ್ಮಾಣ ಉದ್ಯಮ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಸಿಮೆಂಟ್ ಹಾಗೂ ಕಬ್ಬಿಣ ಉತ್ಪಾದನೆಯ ದೊಡ್ಡ ಕಂಪನಿಗಳು ಅವೈಜ್ಞನಿಕವಾಗಿ ಬೆಲೆ ಹೆಚ್ಚಳ ಮಾಡುತ್ತಿವೆ ಎಂದು ದೂರಿದರು.
ನಿಗದಿತ ಪ್ರಮಾಣಕ್ಕಿಂತ ಕಡಿಮೆ ಸಿಮೆಂಟ್ ಹಾಗೂ ಕಬ್ಬಿಣ ಉತ್ಪಾದನೆ ಮಾಡುವ ಮೂಲಕ ಕೃತಕ ಅಭಾವ ಸೃಷ್ಟಿ ಮಾಡಿ ಬೆಲೆ ಹೆಚ್ಚಳ ಮಾಡಿ ಜನರನ್ನು ದೋಚುತ್ತಿವೆ. ಇದರ ವಿರುದ್ಧ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ನೇಮಕ ಮಾಡಬೇಕು. ವೈಜ್ಞಾನಿಕವಾಗಿ ಬೆಲೆ ಹೆಚ್ಚಳ ಮಾಡಲು ರಾಷ್ಟ್ರೀಯ ಮಟ್ಟದ ಪ್ರಾಧಿಕಾರ ರಚನೆ ಮಾಡುವಂತೆ ಆಗ್ರಹಿಸಲಾಗುತ್ತದೆ ಎಂದರು.
ಷೇರು ಮಾರುಕಟ್ಟೆ, ಟೆಲಿಕಾಂ ಕಂಪನಿಗಳು, ವಿಮಾ ಕ್ಷೇತ್ರ, ರಿಯಲ್ ಎಸ್ಟೇಟ್ ನಿಯಂತ್ರಣಕ್ಕೆ ಪ್ರತ್ಯೇಕ ಪ್ರಾಧಿಕಾರಗಳಿವೆ. ಆದರೆ ಸಿಮೆಂಟ್ ಮ್ತತು ಕಬ್ಬಿಣ ನಿಯಂತ್ರಣಕ್ಕೆ ಯಾವುದೇ ಪ್ರಾಧಿಕಾರಗಳಿಲ್ಲ. ಇದರಿಂದಾಗಿ ಮನಸ್ಸೋ ಇಚ್ಛೆ ದರ ಹೆಚ್ಚಳ ಮಾಡಲಾಗುತ್ತಿದೆ. ಹೀಗಾಗಿ ಬೆಲೆ ನಿಯಂತ್ರಣಕ್ಕೆ ಪ್ರಾಧಿಕಾರ ರಚನೆ ಮಾಡಬೇಕಿದ ಎಂದರು.