Wednesday, June 29, 2022

Latest Posts

ನಿವಾರ್ ಎಫೆಕ್ಟ್: ರೈತರಿಗೆ ಪ್ರತಿ ಎಕರೆ ಬೆಳೆಹಾನಿಗೆ 5 ಲಕ್ಷ ನೀಡಲು ರೈತಸಂಘ ಆಗ್ರಹ

 ಹೊಸ ದಿಗಂತ ವರದಿ, ಕೋಲಾರ:

ನಿವಾರ್ ಚಂಡಮಾರುತದಿಂದ ಜಿಲ್ಲೆಯಾದ್ಯಂತ ನಷ್ಟವಾಗಿರುವ ಬೆಳೆಗಳ ಸಮೀಕ್ಷೆಗೆ ವಿಶೇಷ ಅಧಿಕಾರಿಗಳ ತಂಡ ರಚನೆ ಮಾಡಿ, ಪ್ರತಿ ಎಕರೆಗೆ ೫ ಲಕ್ಷರೂ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮುಳಬಾಗಿಲು ಪಟ್ಟಣದಲ್ಲಿ ಶುಕ್ರವಾರ ನಡೆದ ಕಂದಾಯ ಅದಾಲತ್‌ನಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಪ್ರತಿವರ್ಷ ಅತಿವೃಷ್ಠಿ ಅನಾವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ರೈತರ ಬೆಳೆಗಳು ನಾಶವಾಗುತ್ತಲೇ ಇದ್ದು, ಕೋವಿಡ್‌ನಿಂದ ತತ್ತರಿಸಿದ್ದ ರೈತರ ಬಾಳಿಗೆ ನಿವಾರ್ ಚಂಡಮಾರುತದಿಂದಾಗಿ ಕೊಳ್ಳಿ ಇಟ್ಟಂತಾಗಿದೆ ಎಂದು ಹೇಳಿದರು.
ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಅಧಿಕಾರಿಗಳು ಪ್ರತಿಬಾರಿಯೂ ಸರಿಯಾಗಿ ಸಮೀಕ್ಷೆ ಮಾಡಿ ವರದಿ ನೀಡದ ಹಿನ್ನೆಲೆಯಲ್ಲಿ ರೈತರು ಸರ್ಕಾರ ನೀಡುವ ಪರಿಹಾರಗಳಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.
ಹೀಗಾಗಿ ನಿವಾರ್ ಚಂಡಮಾರುತದಿಂದ ಹಾನಿಯಾಗಿರುವ ರೈತರ ತೋಟಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ ೫ ಲಕ್ಷರೂ ಪರಿಹಾರ ಕಲ್ಪಿಸಿ ರೈತರಿಗೆ ಸ್ಪಂದಿಸಬೇಕಿದೆ ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಫಾರೂಖ್‌ಪಾಷ, ಮಳೆಯಾಶ್ರಿತ ರಾಗಿ ಬೆಳೆ ಅನೇಕರದ್ದು ಕಟಾವು ಹಂತ ಮುಗಿದು, ಒಕ್ಕಣೆ ಹಂತದಲ್ಲಿದ್ದು, ಇದೀಗ ನಿವಾರ್ ಚಂಡಮಾರುತದಿಂದಾಗಿ ಸಾಕಷ್ಟು ತೊಂದರೆಗೆ ಒಳಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ತಿಳಿಸಿದರು.
ಇನ್ನು ತೋಟಗಾರಿಕೆ ಬೆಳೆಗಳಿಗೆ ಉತ್ತಮ ಬೆಲೆ ಇದ್ದುದರಿಂದಾಗಿ ರೈತರಲ್ಲಿಯೂ ಸಂತಸ ಮನೆ ಮಾಡಿತ್ತು, ಆದರೆ ನಿವಾರ್ ಚಂಡಮಾರುತದಿಂದಾಗಿ ಗುರುವಾರ ಬೆಳಗಿನ ಜಾವ ೩ ಗಂಟೆಯಿಂದ ಇಡೀ ದಿನ ಸುರಿದ ಮಳೆಯಿಂದಾಗಿ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆ ನಷ್ಟವಾಗಿರುವ ಬಗ್ಗೆ ತಿಳಿದುಬಂದಿದೆ ಎಂದರು.
೩ ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆಗಳಿರುವ ಬಗ್ಗೆ ಹವಾಮಾನ ಇಲಾಖೆಯು ಈಗಾಗಲೇ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಬೆಳೆ ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದ್ದು, ಕೂಡಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ವರದಿ ತರಿಸಿಕೊಂಡು ನಷ್ಟಪರಿಹಾರ ನೀಡಲು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಇರುವ ಹಣದಲ್ಲಿ ಪರಿಹಾರ ಕಲ್ಪಿಸುವ ಸಂಬಂಧ ಈಗಾಗಲೇ ಸಂಬಂಧಪಟ್ಟ ಎಲ್ಲಾ ತಾಲೂಕು ಆಡಳಿತಗಳಿಗೂ ಸೂಚನೆ ನೀಡಲಾಗಿದೆ. ಹೆಚ್ಚಿನ ಹಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಸಿರುಸೇನೆ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಯುವ ಮುಖಂಡ ಕಿಶೋರ್, ರೈತರಾದ ರಾಮಚಂದ್ರಪ್ಪ, ಯಲ್ಲಪ್ಪ, ಮುನಿಯಪ್ಪ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ವೇಣು, ನವೀನ್, ಕಿಶೋರ್, ಸಾಗರ್, ಸುಪ್ರೀಂಚಲ ಮತ್ತಿತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss