ಹೊಸ ದಿಗಂತ ವರದಿ ಶಿವಮೊಗ್ಗ:
ಭವಿಷ್ಯನಿಧಿ(ಪಿಎಫ್) ಅಡಿಯಲ್ಲಿ ನೊಂದಾಯಿತರಾಗಿರುವ ಕಾರ್ಮಿಕರು ಹಾಗೂ ಉದ್ಯೋಗಿಗಳು ಇನ್ನು ಮುಂದೆ ಪಿಂಚಣಿ ಪಡೆಯಲು ಅಲೆದಾಡಬೇಕಾಗಿಲ್ಲ. ಬದಲಾಗಿ ನಿವೃತ್ತಿಯ ದಿನವೇ ಅವರ ಖಾತೆಗೆ ಪಿಂಚಣಿ ಜಮಾ ಆಗುವ ವ್ಯವಸ್ಥೆ ಜಾರಿಗೆ ಬಂದಿದೆ.
ನಗರದ ಭವಿಷ್ಯ ನಿಧಿ ವಿಭಾಗೀಯ ಕಚೇರಿ ಸಹಾಯಕ ಭವಿಷ್ಯ ನಿಧಿ ಆಯುಕ್ತ ಪಿ.ಶ್ರೀನಾಥ್ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಭವಿಷ್ಯನಿಧಿ ಸದಸ್ಯರಿಗೆ ನಿವೃತ್ತಿ ದಿನವೇ ಪಿಂಚಣಿ ದೊರೆಯುವಂತೆ ಮಾಡುವ ಸಲುವಾಗಿ ಪ್ರಯಾಸ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಭವಿಷ್ಯನಿಧಿಸಂಸ್ಥೆ ದೇಶದಲ್ಲಿಯೇ ಅತಿದೊಡ್ಡ ಸಾಮಾಜಿಕ ಭದ್ರತೆ ನೀಡುವ ಸಂಸ್ಥೆಯಾಗಿದೆ. ಕಾರ್ಮಿಕರ ಪಿಂಚಣಿ ಯೋಜನೆ 1995 ಅಡಿಯಲ್ಲಿ ಬರುವ ಉದ್ಯೋಗಿಗಳು, ಕಾರ್ಮಿಕರು 58 ವರ್ಷಕ್ಕೆ ಸೇವಾ ನಿವೃತ್ತಿ ಹೊಂದುವಾಗ ಅವರಿಗೆ ಸೇವಾ ನಿವೃತ್ತಿ ಹೊಂದುವ ದಿನವೇ ಭವಿಷ್ಯ ನಿಧಿಸಂಸ್ಥೆಯು ಪಿಂಚಣಿ ಆದೇಶದ ಪ್ರತಿ ನೀಡುತ್ತದೆ. ಇದಕ್ಕಾಗಿ ಪ್ರಯಾಸ್ ಯೋಜನೆ ಜಾರಿಯಾಗಿದೆ ಎಂದರು.