ಬೆಂಗಳೂರು: ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಮತ್ತು ನಟ ಸತೀಶ್ ನೀನಾಸಂ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿ ಬರುತ್ತಿರೋದು ಗೊತ್ತಿರುವ ವಿಚಾರ. ಚಿತ್ರಕ್ಕೆ ಪೆಟ್ರೋಮ್ಯಾಕ್ಸ್ ಎಂದು ಟೈಟಲ್ ಇಡಲಾಗಿದೆ. ಸ್ಯಾಂಡಲ್ ವುಡ್ ನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಪೆಟ್ರೋಮ್ಯಾಕ್ಸ್ ಈಗ ಚಿತ್ರೀಕರಣಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಅಕ್ಟೋಬರ್ 19ರಿಂದ ಅಂದರೆ ಇವತ್ತಿನಿಂದ ಸಿನಿಮಾತಂಡ ಚಿತ್ರೀಕರಣಕ್ಕೆ ಹೊರಟಿದೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಸಿನಿಮಾತಂಡ ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಹೊರಡುತ್ತಿದೆ. ಇದೀಗ ಚಿತ್ರದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ.
ಈ ಚಿತ್ರದಲ್ಲಿ ಸತೀಶ್ ನೀನಾಸಂ ಜೊತೆ ನಟಿಸಲು ನಾಯಕಿ ಫಿಕ್ಸ್ ಆಗಿದ್ದಾರೆ. ಹೌದು, ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ನಟಿ ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹರಿಪ್ರಿಯಾ ನೀನಾಸಂ ಸತೀಶ್ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ.
ಅಂದ್ಹಾಗೆ ಹರಿಪ್ರಿಯಾ ಈ ಮೊದಲು ವಿಜಯ್ ಪ್ರಸಾದ್ ನಿರ್ದೇಶನದ ನೀರ್ ದೋಸೆ ಸಿನಿಮಾದಲ್ಲಿ ನಟಿಸಿದ್ದರು. ಕುಮುದಾ ಪಾತ್ರದ ಮೂಲಕ ಚಿತ್ರಪ್ರಿಯ ನಿದ್ದೆಗೆಡಿಸಿದ್ದರು. ಇದೀಗ ಈ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ.