Sunday, August 14, 2022

Latest Posts

ನೀರಾವರಿ ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ: ಶಾಸಕ ಕೆ.ಜಿ.ಬೋಪಯ್ಯ

ಮಡಿಕೇರಿ: ನೀರಾವರಿ ಕೃಷಿ ಭೂಮಿಯನ್ನು ಯಾರೇ ಕೊಂಡರೂ ಅದನ್ನು ಕೃಷಿಗೇ ಉಪಯೋಗಿಸಬೇಕು. ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂಬ ನಿರ್ಬಂಧ ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯಲ್ಲಿ ಅಡಕವಾಗಿದ್ದು, ಇದರಿಂದಾಗಿ ಈ ಮಸೂದೆ ರೈತರಿಗೆ ಒಳಿತನ್ನೇ ಮಾಡುತ್ತದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು.
ನಗರದ ಬಾಲಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ಮೋರ್ಚಾ ಗ್ರಾಮಾಂತರ ಮಂಡಲದ ವತಿಯಿಂದ ನಡೆದ ಗಾಂಧಿ ಜಯಂತಿ ಆಚರಣೆ ಹಾಗೂ ಹಿಂದುಳಿದ ಮೋರ್ಚಾದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂತಹ ಮಸೂದೆಗಳನ್ನು ಮಾಡುವಂತಹ ಸಂದರ್ಭದಲ್ಲಿ ಸಮಿತಿಗಳನ್ನು ರಚಿಸಿ ಅವುಗಳ ನೀಡುವ ಶಿಫಾರಸ್ಸಿನ ಅನ್ವಯ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಯನ್ವಯ ರೈತರು ಸ್ವಾಭಿಮಾನದಿಂದ ಬೆಳೆದ ಆಹಾರ ಉತ್ಪನ್ನವನ್ನು ಅವರಿಗೆ ಅನುಕೂಲವಾಗುವಂತೆ ಮಾರಾಟ ಮಾಡಿಕೊಳ್ಳಬಹುದಾಗಿದೆ. ದಲ್ಲಾಳಿಗಳ ಮೊರೆ ಹೋಗುವ ಅವಶ್ಯಕತೆ ಇರುವುದಿಲ್ಲ. ಆ ಮೂಲಕ ತಮ್ಮ ಉತ್ಪನ್ನಕ್ಕೆ ತಕ್ಕ ಬೆಲೆ ಪಡೆಯಬಹುದಾಗಿದೆ. ಆದ್ದರಿಂದ ಇದು ರೈತ ಪರವಾದ ಮಸೂದೆಯಾಗಿದೆ ಎಂದು ಹೇಳಿದರು.
ಕೊರೋನಾ ನಿರ್ಮೂಲನೆ ಮಾಡುವ ಸಲುವಾಗಿ ಜನರಲ್ಲಿ ಜಾಗೃತಿಯ ಅವಶ್ಯಕತೆ ಇದೆ. ಕೋವಿಡ್‍ಗೆ ಔಷದಿ ಇಲ್ಲದಿರುವುದರಿಂದ ಎಲ್ಲರೂ ಮಾಸ್ಕ್ ಧರಿಸಿ ಓಡಾಡುವುದನ್ನು ರೂಢಿಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಅನಾವಶ್ಯಕ ತಿರುಗಾಟವನ್ನು ನಿಯಂತ್ರಣ ಮಾಡಿಕೊಳ್ಳಬೇಕು ಎಂದ ಅವರು, ಸಾಂಕ್ರಾಮಿಕ ಸೋಂಕು ಕೊರೋನಾ ಆದಷ್ಟು ಬೇಗ ತೊಲಗಲು ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲರೂ ಕಂಕಣಬದ್ಧರಾಗಬೇಕು ಎಂದು ನುಡಿದರು.
ಮಡಿಕೇರಿ ನಗರದಲ್ಲಿ ಬಿ.ಜೆ.ಪಿ ಇನ್ನೂ ಹೆಚ್ಚು ಬಲಿಷ್ಠವಾಗಬೇಕಿದೆ. ಇದಕ್ಕೆ ತನ್ನ ಸಂಪೂರ್ಣ ಸಹಕಾರವಿದೆ ಎಂದು ಹೇಳಿದ ಅವರು, ಮಡಿಕೇರಿಯ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಈಗಾಗಲೇ ಗಮನಕ್ಕೆ ಬಂದಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ರಾಷ್ಟ್ರದ ಹಿತವನ್ನು ಚಿಂತಿಸಿ ದೇಶವನ್ನು ಕಟ್ಟುವ ಯೋಚನೆ ಹಾಗೂ ರಾಮರಾಜ್ಯದ ಕನಸನ್ನು ನನಸಾಗಿಸಲು ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರಕಾರದ ಅವಶ್ಯಕತೆ ಇದೆ. ಆತ್ಮ ನಿರ್ಭರ ಭಾರತ ಎಂದರೆ ಸ್ವಾವಲಂಬಿ ರಾಷ್ಟ್ರ ನಿರ್ಮಾಣವಾಗಬೇಕು. ರೈತರು ಸ್ವಾವಲಂಬಿಯಾಗಿರಬೇಕು. ಆಮದು- ರಫ್ತು ಸಮಾನವಾಗಿರಬೇಕು. ರಫ್ತಿನ ಪ್ರಮಾಣ ಕಡಿಮೆಯಾಗಿ ಆಮದಿನ ಪ್ರಮಾಣ ಹೆಚ್ಚಾದಾಗ ಆರ್ಥಿಕ ಕುಸಿತ ಉಂಟಾಗುತ್ತದೆ. ಆದರೆ ದೇಶದಲ್ಲಿ ಆಮದು ಕಡಿಮೆಯಾಗಿ ರಫ್ತು ಹೆಚ್ಚಾಗಬೇಕು. ಅದಕ್ಕಾಗಿ ರೈತರ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದುಳಿದ ಮೋರ್ಚಾದ ತಾಲೂಕು ಅಧ್ಯಕ್ಷ ಕೋಲೆಯಂಡ ಗಿರೀಶ್ ವಹಿಸಿದ್ದರು. ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ರಘು ಆನಂದ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ತಾಲೂಕು ಉಪಾಧ್ಯಕ್ಷ ಕೆ.ಎ ಅಶೋಕ್, ಕೋಡೀರ ಪ್ರಸನ್ನ, ರಘು ಪೂಣಚ್ಚ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss