Thursday, June 30, 2022

Latest Posts

ನುಚ್ಚು ನೂರಾಯಿತೇ ವ್ಯಸನಮುಕ್ತ ಭಾರತ ಕನಸು ? ಮನೋನಿಗ್ರಹವಿಲ್ಲದ ಮದ್ಯಪ್ರಿಯ(ಯೆ)ರು ಬೀದಿಗೆ ಬಿದ್ದರು..!

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಲಾಕ್‌ಡೌನ್ ತುಸು ಸಡಿಲವಾಗುತ್ತಿದ್ದಂತೆ ಮದ್ಯಪ್ರಿಯರು ಬೀದಿಗೆ ಬಿದ್ದರು! ಕಳೆದ ನಲವತ್ತು ದಿನಗಳಿಂದ ಹೆಂಡದ ರುಚಿ ಕಾಣದೆ ತಾವು ಕುಳಿತಲ್ಲೇ ವಿಲವಿಲ ಒದ್ದಾಡಿದ ಎಲ್ಲರಿಗೂ ಅದೇನೋ ಆನಂದ ಸಂತೋಷ..! ಈ ರೀತಿ ಮದ್ಯದ ಬಾಟಲಿ ಖರೀದಿಗಾಗಿ ಮುಗಿಬಿದ್ದವರಲ್ಲಿ ಮಾನಿನಿಯರೂ ಮುಂದು.. !!

ಸೋಮವಾರದಂದು ದೇಶದ ಉದ್ದಗಲಕ್ಕೂ ಕಂಡ ಈ ದೃಶ್ಯಗಳು ನಿಜಕ್ಕೂ ಭಾರತಕ್ಕೆ ಶೋಭೆ ತರುವಂತಹದಲ್ಲ. ಪ್ರಾಯಶಃ ಲಾಕ್‌ಡೌನ್ ಸ್ವಲ್ಪ ಸಡಿಲವಾಗಿದೆ ಎಂದಾಗ ರೇಷನ್ ಅಂಗಡಿ ಮುಂದೆಯೋ, ಸಾರ್ವಜನಿಕ ಆಸ್ಪತ್ರೆ ಮುಂದೆಯೋ., ಬೇಸಿಗೆ ಆಗಿದ್ದರಿಂದ ಕುಡಿಯಲು ನೀರಿಲ್ಲದೆ ಒದ್ದಾಡಿದ ಗ್ರಾಮೀಣ ಜನತೆ ಬೋರ್‌ವೆಲ್ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಮಾಧ್ಯಮದಲ್ಲಿ ಸಹಜವಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಸೋಮವಾರ ಸಂಜೆವರೆಗೂ ದೇಶದ ಎಲ್ಲ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪದೇ ಪದೇ ಕಾಣಿಸಿಕೊಂಡಿದ್ದು ಬರೀ ಮದ್ಯ ಸಮಾರಾಧನೆಯ ದೃಶ್ಯಾವಳಿಗಳೇ!

ಇದು ಟಿವಿ ಮಾಧ್ಯಮಗಳ ಟಿ ಆರ್ ಪಿ ಗಳಿಕೆಯ ಅಗ್ಗದ ಸರಕು. ಕೈಗೆ ಸಿಕ್ಕಿದಷ್ಟು ದೋಚುವ ವ್ಯಾಪಾರಿಕ ಮನಸಗಳು ಸಿಕ್ಕಿದ್ದನ್ನು ದೋಚದೆ ಸುಮ್ಮನೆ ಬಿಟ್ಟು ಬಿಡುವುದೇ ? ಸಾಧ್ಯವೇ ಇಲ್ಲ. ಇರಲಿ. ಮಾಧ್ಯಮಗಳು ಇದನ್ನೇನೋ ವರದಿ ಮಾಡಿತು. ಆದರೆ ವಾಸ್ತವವನ್ನು ತಸು ಗಂಭೀರವಾಗಿ ನೋಡಿದಾಗ ಗಾಂಧಿ ಜನಿಸಿದ ಈ ದೇಶದಲ್ಲಿ ಮದ್ಯಕ್ಕೆ ಇಷ್ಟೊಂದು ಮಹತ್ವವಿರುವುದು ಕಂಡು ದುಃಖಪಡುವಂತಾಗುತ್ತೆ. ಒಂದು ಕಡೆ ಅಬಕಾರಿ ಆದಾಯವಿಲ್ಲದೆ ಸರ್ಕಾರ ನಡೆಸಲು ಸಾಧ್ಯವಿಲ್ಲ ಎನ್ನುವ ನಾಯಕರು.

ಇನ್ನೊಂದು ಕಡೆ ದೇಶಿಯತೆ ಮತ್ತು ಸರಳ ಜೀವನದ ಬಗ್ಗೆ ಪುಂಖಾನುಪುಂಖವಾಗಿ ಉಪದೇಶ ನೀಡುವ ಡೋಂಗಿ ಜನರು. ಮದ್ಯ ಮುಟ್ಟುವುದಿಲ್ಲ ಎಂಬ ಸಂಕಲ್ಪ, ಬರೀ ಟಿವಿ ಜಾಹೀರಾತುಗಳಿಗೆ, ವೇದಿಕೆಯ ಭಾಷಣಗಳಿಗೆ ಹಾಗೂ ಬಾಹ್ಯ ತೋರ್ಪಡಿಕೆಗೆ ಇದು ಫ್ಯಾಷನ್ ಆಗಿದ್ದರೆ ಸಾಕೇ? ಭಾರತೀಯರ ಅಂತರಂಗದಲ್ಲಿ ಇದು ನಿಗ್ರಹ ಶಕ್ತಿಯಾಗಿ ತಳವೂರಿರಬೇಕಲ್ಲವೇ? ಇಂತಹ ದುರ್ಬಲ ಯುವ ಹೃದಯಗಳು ಮತ್ತು ಮನಸುಗಳಿಂದ ನಾವಿಂದು ವ್ಯಸನಮುಕ್ತ ಭಾರತ ಕಟ್ಟಲು ಸಾಧ್ಯವೇ? ಹೆಂಡ, ಸಾರಾಯಿ, ಬೀಡಿ, ಸಿಗರೇಟು, ಗುಟ್ಕಾ,.

ಇವೆಲ್ಲ ವ್ಯಸನಗಳಲ್ಲದೆ ಮತ್ತೇನು ? ಈ ದೇಶದಲ್ಲಿ ಮಾದಕವಸ್ತುಗಳನ್ನು ಲಿಂಗಬೇಧವಿಲ್ಲದೆ ವ್ಯಾಪಕವಾಗಿ ಬಳಕೆಯಾಗುತ್ತಿರುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ? ಜಾಗತೀಕರಣದ ದಾಸಾನುದಾಸನಾದ ಭಾರತೀಯ ಪ್ರಜೆ ಇಂದು ಪಾಶ್ಚಿಮಾತ್ಯ ಬದುಕಿನ ಒಂದೊಂದು ಅಂಶವೂ ತನಗೆ ಅನಿವಾರ್ಯ. ಇದಿಲ್ಲದೆ ತಾನು ಬದುಕಲು ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿ ಅಸಹಾಯಕನಾಗಿದ್ದಾನೆ. ಮನುಷ್ಯನ ದೌರ್ಬಲ್ಯ ಒಂದಿಲ್ಲ ಒಂದು ಸಂದರ್ಭದಲ್ಲಿ ಹೊರ ಬರಲೇಬೇಕು. ಇಟಲಿ, ಫ್ರಾನ್ಸ್, ಇಂಗ್ಲೆಂಡ್, ವಾಷಿಂಗ್‌ಟನ್ ನಗರಗಳ ಮಾಲುಗಳ ಮುಂದೆ ಅಥವಾ ವೈನ್‌ಶಾಪ್, ಬಾರ್‌ಗಳ ಮುಂದೆ ಅಲ್ಲಿನ ಜನತೆ ಮದ್ಯದ ಬಾಟಲಿಗಳಿಗಾಗಿ ಕ್ಯೂ ನಿಂತರೆ ಅದು ಸಹಜವೇ. ಆದರೆ ಮದ್ಯವೇ ಭಾರತೀಯ ಕುಟುಂಬದ ಮೊದಲ ಶತ್ರು ಎಂದು ಜೀವನವಿಡೀ ಸಮರ ನಡೆಸಿದ ಬಾಪೂಜಿ ದೇಶಕ್ಕೆ ಈ ಗತಿ ಬರಬೇಕೇ ..? ಎಲ್ಲಿದೆ ದೇಶಿಯತೆ? ಎತ್ತ ಸಾಗಿದೆ ಈ ದೇಶ ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss