ಹೊಸ ದಿಗಂತ ವರದಿ, ಕಲಬುರಗಿ:
ನುಡಿಗಿಂತ ನಡೆ ಪ್ರಧಾನ ಎಂದು ಹಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಪ್ರತಿಪಾದಿಸಿದರು. ನಗರದ ಎಸ್ಎಂ ಪಂಡಿತ್ ರಂಗಮಂದಿರದಲ್ಲಿ ಯುವ ಬ್ರಿಗೇಡ್ ಮಂಗಳವಾರ ಶಿಕ್ಷಕರಿಗಾಗಿ ಆಯೋಜಿಸಿದ್ದ ಪ್ರೇರಣ ಪ್ರವಾಹ ಉದ್ಘಾಟಿಸಿ ಆಶೀರ್ವಚನ ನೀಡಿದ ಸ್ವಾಮೀಜಿ, ಬದಲಾವಣೆ ನಮ್ಮಿಂದಲೇ ಶುರುವಾಗಬೇಕು. ಕಾಲ ಕೆಟ್ಟಿದೆ ಯಾರು ಸುಧಾರಿಸುತ್ತಾರೆ ಎಂದು ಕಾಯುತ್ತ ಕುಳಿತರೆ ಸಮಾಜ ಉದ್ಧಾರ ಆಗದು. ನಾವು ನಡೆ, ನುಡಿಯಲ್ಲಿ ಬದಲಾವಣೆ ತಂದು ದೇಶದ ಬದಲಾವಣೆಗೆ ನಾವೇ ನಾಂದಿ ಹಾಡಬೇಕು ಎಂದು ಸಲಹೆ ನೀಡಿದರು.
ರುಚಿಯ ಜತೆ ಅಭಿರುಚಿಯೂ ಇರಬೇಕು. ಪಠ್ಯದಲ್ಲಿನ ವಿಷಯ ಕಲಿಸುವುದು ರುಚಿ, ಪಠ್ಯದಲ್ಲಿ ಇರದ ಉತ್ತಮ ವಿಷಯ ಕಲಿಸುವುದು ಅಭಿರುಚಿ. ಶಿಕ್ಷಕರು ಇಂದು ಕೇವಲ ರುಚಿ ಅಷ್ಟೆ ಒಪ್ಪಿಕೊಂಡಿದ್ದಾರೆ. ಅಭಿರುಚಿ ತಿರಸ್ಕರಿಸುತ್ತಿದ್ದಾರೆ. ಹೀಗಾಗಿ ಮಕ್ಕಳು ಹೆಚ್ಚು ಅಂಕ ಪಡೆದು ಸಾಮಾನ್ಯ ಜ್ಞಾನ ಕಳೆದುಕೊಳ್ಳುತ್ತಿದ್ದಾರೆ. ಅಂಕಗಳ ಜತೆ ಸಾಮಾನ್ಯ ಜ್ಞಾನ ಸಿಕ್ಕರೆ ನಮ್ಮ ದೇಶದ ವಿದ್ಯಾರ್ಥಿಗಳು ವಿಶ್ವದಲ್ಲೆ ಮಾದರಿಯಾಗಬಲ್ಲರು.ಶಿಕ್ಷಕರ ಮೇಲೆ ಸಮಾಜ ಸುಧಾರಣೆಯ ಬಹುದೊಡ್ಡ ಜವಬಾರಿ ಇದೆ. ರುಚಿಯ ಜತೆ ಅಭಿರುಚಿಯನ್ನು ಬೆಳಸಿಕೊಂಡು ಸುಂದರ ಸಮಾಜ ನಿರ್ಮಾಕರಾಗಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಕೇಂದ್ರ ಬಿಂದು ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ದೇಶದ ಭವಿಷ್ಯ ರೂಪಿಸುವ ಶಿಕ್ಷಕರಿಗಾಗಿ ಪ್ರೇರಣೆ ನೀಡುವ ಉದ್ದೇಶದಿಂದ ಯುವ ಬ್ರಿಗೇಡ್ ರಾಜ್ಯಾದ್ಯಂತ ಪ್ರೇರಣಾ ಪ್ರವಾಹ ಕಾರ್ಯಕ್ರಮವವನ್ನು ಆಯೋಜಿಸುತ್ತಿದೆ ಎಂದರು. ಭವ್ಯ ರಾಷ್ಟ್ರ ನಿರ್ಮಿಸುವ ಶಿಕ್ಷಕರಿಗೆ ಪ್ರೇರಣೆ ನೀಡುವ ಉದ್ದೇಶ ಹೊಂದಲಾಗಿದೆ. ಶಿಕ್ಷಕರು ಕ್ರಿಯಾಶೀಲರಾಗಿದ್ದರೇ, ವಿದ್ಯಾರ್ಥಿಗಳು ಮತ್ತು ಸಮಾಜವು ಕ್ರಿಯಾಶೀಲವಾಗಬಲ್ಲದು ಎಂದರು.
ಪತ್ರಕರ್ತ ರವೀಂದ್ರ ದೇಶಮುಖ, ಕಿರಣ್, ಜಯಸಿಂಹ, ಸುರೇಶ ಕುಲಕರ್ಣಿ, ಸೂಲಿಬೆಲೆ ಚಕ್ರವರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಯುವ ಬ್ರಿಗೇಡ ಸದಸ್ಯರು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.