ಮಂಗಳೂರು: ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಅಂಗೀಕಾರಗೊಂಡಿರುವ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ, ರೈತರ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ಕಾಯ್ದೆ ರೈತ ಸ್ನೇಹಿಯಾಗಿವೆ. ಪ್ರತಿಪಕ್ಷಗಳು ಈ ಕಾಯ್ದೆಗಳ ಬಗ್ಗೆ ಗುಲ್ಲೆಬ್ಬಿಸುವುದು ರೈತ ವಿರೋಧಿಯಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾ.ಗಣೇಶ ಕಾರ್ಣಿಕ್ ಹೇಳಿದ್ದಾರೆ.
ಅವರು ಸೋಮವಾರ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯೂ ಸೇರಿದಂತೆ ದೇಶದ ಪ್ರಮುಖ ಪಕ್ಷಗಳು ರೈತರಿಗೆ ಸೌಲಭ್ಯಗಳನ್ನು ತಲುಪಿಸುವ ಕುರಿತು ತಮ್ಮ ಪ್ರಣಾಳಿಕೆಯಲ್ಲಿ ಹೇಳುತ್ತಾ ಬಂದಿವೆ ಎಂದರು.
ನೂತನ ಮಸೂದೆಗಳು ರೈತರು ಮತ್ತು ವ್ಯಾಪಾರಿಗಳು ತಮಗಿಷ್ಟವಾದ ಕಡೆ ಕೃಷಿ ಉತ್ಪನ್ನ ಮಾರಾಟ ಮತ್ತು ಖರೀದಿಸಬಹುದಾಗಿದೆ. ಪರ್ಯಾಯ ವ್ಯಾಪಾರದ ಮೂಲಕ ಬೆಳೆಗಳಿಗೆ ನ್ಯಾಯಯುತ ದರ ಪಡೆಯಲು ಪೂರಕವಾಗಿದೆ. ಕೃಷಿ ಉತ್ಪನ್ನಗಳ ಆನ್ಲೈನ್ ವ್ಯಾಪಾರಕ್ಕೂ ಕಾಯ್ದೆ ಸಹಕಾರಿಯಾಗಿದೆ ಎಂದು ಕ್ಯಾ. ಕಾರ್ಣಿಕ್ ವಿವರಿಸಿದರು.
ಕೃಷಿ ಉದ್ಯಮ ಸಂಸ್ಥೆಗಳು, ಸಗಟು ವ್ಯಾಪಾರಿಗಳು, ರಫ್ತುದಾರರು, ಚಿಲ್ಲರೆ ವ್ಯಾಪಾರಸ್ಥರ ಜೊತೆಯಲ್ಲಿ ವಹಿವಾಟು ನಡೆಸಲು ರೈತರಿಗೆ ಭದ್ರತೆ ಮತ್ತು ಪ್ರೋತ್ಸಾಹ ನೀಡುವ ರೀತಿಯಲ್ಲಿ ಕಾಯ್ದೆಯನ್ನು ರೂಪಿಸಲಾಗಿದೆ. ನ್ಯಾಯಯುತ ದರದ ಚೌಕಟ್ಟಿನೊಳಗೆ ಕೃಷಿ ವಸ್ತುಗಳ ಮಾರಾಟ ಮತ್ತು ಉನ್ನತ ಕೃಷಿ ಸೇವೆಯನ್ನು ಒದಗಿಸುವ ಗುರಿ ನೂತನ ಕಾಯೆಗಳದ್ದಾಗಿದೆ. ಕೃಷಿ ವಲಯದಿಂದ ದೇಶಕ್ಕಿರುವ ನಿರೀಕ್ಷೆ ಮತ್ತು ಅಗತ್ಯತೆಯನ್ನು ಮಸೂದೆಗಳು ಪೊರೈಸುವ ಆಶಯ ಹೊಂದಲಾಗಿದೆ ಎಂದು ವಕ್ತಾರರು ನುಡಿದರು.
ನೂತನ ಮಸೂದೆ ರೈತರು ಉತ್ತಮ ಬೆಳೆ ಬೆಳೆದು ಹೆಚ್ಚು ಆದಾಯ ಗಳಿಸಲು ಪ್ರೇರೇಪಿಸುತ್ತದೆ. ಎಪಿಎಂಸಿ, ಮಂಡಿ ಹೊರತಾಗಿಯೂ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವನ್ನು ಕಾಯ್ದೆ ನೀಡುತ್ತದೆ. ದೇಶದಲ್ಲಿ ಶೇ.೮೬ರಷ್ಟು ಸಣ್ಣ ರೈತರಿದ್ದಾರೆ. ಅವರು ಲಾಭದ ಕೃಷಿಯಲ್ಲಿ ತೊಡಗಲು ಕಾಯ್ದೆ ಪೂರಕವಾಗಬಲ್ಲುದು. ಕೃಷಿಯಲ್ಲಿ ಹೆಚ್ಚೆಚ್ಚು ತಂತ್ರಜ್ಞಾನ ಬಳಕೆ ಮತ್ತು ಕೃಷಿ ವಲಯದಲ್ಲಿ ಮೂಲ ಸೌಕರ್ಯ ವೃದ್ಧಿಗೆ ಹೊಸ ಕಾನೂನುಗಳು ಸಹಕಾರಿಯಾಗಲಿವೆ ಎಂದು ಗಣೇಶ ಕಾರ್ಣಿಕ್ ಬಣ್ಣಸಿದರು.
ಪ್ರತಿಪಕ್ಷಗಳು ಕಾಯ್ದೆಯಿಂದ ಮುಂದೆ ಬೆಂಬಲ ಬೆಲೆ ಇರುವುದಿಲ್ಲ ಎಂದು ಆರೋಪಿಸುತ್ತಿವೆ. ಬೆಂಬಲ ಬೆಲೆ ಮುಂದುವರಿಯಲಿದೆ ಮಾತ್ರವಲ್ಲದೆ ಅದನ್ನು ಇನ್ನೂ ಹೆಚ್ಚು ಬೆಳೆಗಳಿಗೆ ವಿಸ್ತರಿಸಲಾಗುತ್ತದೆ. ಗುತ್ತಿಗೆ ಫಾರ್ಮಿಂಗ್ನಿಂದ ರೈತರ ಜಮೀನು ಉಳ್ಳವರ ಪಾಲಾಗಲಿದೆ ಎಂಬುದು ಇನ್ನೊಂದು ಆರೋಪವಾಗಿದೆ. ಇದರಲ್ಲಿ ಭೂಮಿಯ ಮೇಲಿನ ಹಕ್ಕು ಇರುವುದಿಲ್ಲ, ಒಡಬಂಡಿಕೆ ಬೆಳೆಯುವ ಬೆಳೆಗೆ ಸೀಮಿತವಾಗಿರುತ್ತದೆ ಎಂದು ಕಾರ್ಣಿಕ್ ಸ್ಪಷ್ಟ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಮತ್ತು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತಿದ್ದರು.
ನೂತನ ಮಸೂದೆಗಳ ಬಗ್ಗೆ ಸಾಹಿತ್ಯ ರಚನೆ
ನೂತನ ಕಾಯ್ದೆಗಳ ಕುರಿತಾಗಿ ರೈತರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕೆಲಸವನ್ನು ಪಕ್ಷದ ರೈತ ಮೋರ್ಚಾ ವತಿಯಿಂದ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಮಾಧ್ಯಮಗಳಲ್ಲಿ ತಜ್ಞರು ಲೇಖನಗಳನ್ನು ಬರೆಯಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸುದ್ದಿಗೋಷ್ಠಿಗಳು ನಡೆಯಲಿವೆ. ಮಾತ್ರವಲ್ಲದೆ ನೂತನ ಮಸೂದೆಗಳ ಬಗ್ಗೆ ಸಾಹಿತ್ಯ ರಚನೆ ಮಾಡಿ ಅದನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುವುದು.
ಕ್ಯಾ.ಗಣೇಶ್ ಕಾರ್ಣಿಕ್, ರಾಜ್ಯ ಬಿಜೆಪಿ ವಕ್ತಾರ