ಹೊಸದಿಲ್ಲಿ: ಕೃಷಿ ಮಸೂದೆ ಬಗ್ಗೆ ದಶಕಗಳಿಂದ ದೇಶ ಆಳಿದವರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದ ಹೊಸ ರೇಲ್ವೆ ಬ್ರಿಡ್ಜ್ ಲೋಕಾರ್ಪಣೆ ಹಾಗೂ ವಿದ್ಯುತೀಕರಣ ಯೋಜನೆಯನ್ನು ಉದ್ಘಾಟಿಸಿದ ಮೋದಿ, ಲೋಕಸಭೆಯಲ್ಲಿ ಅಂಗೀಕಾರವಾಗಿವ ಕೃಷಿ ಮಸೂದೆ ಬಗ್ಗೆ ಮಾತನಾಡಿದರು.
ಈ ಮಸೂದೆಯಿಂದಾಗಿ ರೈತರಿಗೆ ನ್ಯಾಯವಾದ ಬೆಲೆ ಸಿಗುವುದಿಲ್ಲ ಎಂಬ ತಪ್ಪು ಸಂದೇಶ ನೀಡಲಾಗುತ್ತಿದೆ. ದೇಶದ ರೈತರು ಎಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ ಎಂದು ತಮ್ಮ ಮಿತ್ರಪಕ್ಷ ಅದರಲ್ಲಿ ಕಾಂಗ್ರೆಸ್ ನಾಯಕರಿಗೆ ಮಾತಿನಲ್ಲಿ ಚಾಟಿಬೀಸಿದ್ದಾರೆ.
ಈ ಮಸೂದೆ ಜಾರಿಯಾದರೆ, ರೈತರಿಂದ ಅಕ್ಕಿ ಮತ್ತು ಗೋಧಿಯನ್ನು ಖರೀದಿಸಲಾಗುವುದಿಲ್ಲ ಎಂಬ ಸುಳ್ಳು ಹೇಳಲಾಗುತ್ತಿದೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರಾವಾದದ್ದು. ಈ ಮೂಲಕ ಹೇಳಿಕೆ ನೀಡಿ ರೈತರನ್ನು ಮೋಸಗೊಳಿಸುವ ಯತ್ನ ನಡೆಸಲಾಗುತ್ತಿದ್ದು, ಅನ್ನದಾತರಿಗೆ ಸರಿಯಾದ ದರ ಸಿಗುವುದಿಲ್ಲ ಎಂಬ ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ. ಆದ್ರೆ ದೇಶದ ರೈತರಿಗೆ ತಿಳುವಳಿಕೆ ಇದೆ ಅನ್ನೋದನ್ನ ಅವರು ಮರೆತಿದ್ದಾರೆ ಎಂದು ಮೋದಿ ಹೇಳಿದರು.
ಕೃಷಿಯಲ್ಲಿ ರೈತರಿಗೆ ಹೊಸ ಸ್ವಾತಂತ್ರ್ಯ ನೀಡಲಾಗಿದೆ. ಈಗ ಅವರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆ ಹಾಗೂ ಅವಕಾಶಗಳು ಸಿಗಲಿವೆ. ಮಸೂದೆಗಳು ಅಂಗೀಕಾರವಾಗಿದ್ದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರೈತರನ್ನ ಮಧ್ಯವರ್ತಿಗಳಿಂದ ರಕ್ಷಿಸಲು ಈ ಮಸೂದೆ ತರುವುದು ಅನಿವಾರ್ಯವಾಗಿತ್ತು. ಇದು ರೈತರ ರಕ್ಷಾ ಕವಚ ಎಂದು ಮೋದಿ ಹೇಳಿದರು.
ಈ ಮಸೂದೆ ಮೂಲಕ ಕನಿಷ್ಟ ಬೆಂಬಲ ಬೆಲೆಯೊಂದಿಗೆ ಉತ್ತಮ ಬೆಲೆ ನೀಡಿ ರೈತರಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.