ತಿರುವನಂತಪುರಂ: ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ 2018ರಲ್ಲಿ ಕೇರಳದಲ್ಲಿ ಸಂಭವಿಸಿದ್ದ ಭೀಕರ ಜಲಪ್ರಳಯ ಸಂದರ್ಭ ಅಭಿಮಾನಿಯೊಬ್ಬರ ಪರವಾಗಿ ನಿಂತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬರೋಬ್ಬರಿ 1 ಕೋಟಿ ರೂ. ನೆರವು ನೀಡುವ ಮೂಲಕ ಅಭಿಮಾನಿಯೇ ಆಸೆ ನೆರವೇರಿಸಿದ್ದರು ಎಂಬ ವಿಚಾರವನ್ನು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನೆನಪಿಸಿಕೊಂಡಿದ್ದಾರೆ.
ಏನಾಗಿತ್ತು ಅಂದು?
2018ರಲ್ಲಿ ಕೇರಳದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ಸಂದರ್ಭದಲ್ಲಿ ಅಭಿಮಾನಿ ಶುಭಂ ರಂಜನ್ ಎಂಬವರು ನಾನು ಸ್ವಲ್ಪ ನೆರವು ನೀಡಬೇಕಾಗಿದೆ ಆದರೆ, ನನ್ನ ಬಳಿ ಹಣ ಇಲ್ಲ ಹೇಗೆ ನೆರವು ನೀಡೋದು ಹೇಳಿ ಎಂದು ಟ್ವೀಟ್ ಮಾಡಿ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸುಶಾಂತ್ ಸಿಂಗ್ ರಜಪೂತ್ ನಿಮ್ಮ ಪರವಾಗಿ ನಾನು ನೆರವು ನೀಡುತ್ತೇನೆ ಎಂದು ಹೇಳಿದ್ದರಲ್ಲದೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ. ಧನ ಸಹಾಯ ಮಾಡಿದ್ದರು. ಇದನ್ನು ‘ಮೈ ಕೇರಳ’ ಹ್ಯಾಷ್ ಟಾಗ್ ನಲ್ಲಿ ಅಭಿಮಾನಿಗಳೊಂದಿಗೆ ಈ ವಿಷಯವನ್ನು ಹಂಚಿಕೊಂಡಿದ್ದರು. ಅದೇ ರೀತಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವನ್ನು ನೀಡಿದ್ದರು.
ಪ್ರವಾಹದ ಸಂದರ್ಭದಲ್ಲಿ ಸುಶಾಂತ್ ಸಿಂಗ್ ನೀಡಿದ್ದ ನೆರವು ಹಾಗೂ ಬೆಂಬಲವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನೆನೆಪಿಸಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಅವರ ನಿಧನಕ್ಕೆ ಟ್ವೀಟ್ ಮೂಲಕ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪಿಣರಾಯ್ ವಿಜಯನ್, ಸುಶಾಂತ್ ಸಿಂಗ್ ನಿಧನದಿಂದ ಬಾಲಿವುಡ್ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ವರ್ಗಕ್ಕೆ ಸಂತಾಪ ಸೂಚಿಸುತ್ತೇನೆ. ಪ್ರವಾಹದ ಸಂದರ್ಭದಲ್ಲಿ ಅವರು ಮಾಡಿರುವ ಸಹಾಯ ನೆನಪಾಗುತ್ತಿದೆ ಎಂದಿದ್ದಾರೆ.