Wednesday, August 10, 2022

Latest Posts

ನೆರೆಹಾವಳಿಯಿಂದ ಸಂಕಷ್ಟಕ್ಕೆ ಸಿಲುಕು ಬಂದಿದ್ದ ಬಾಲಕನಿಗೆ ಬೈಸಿಕಲ್,ಬಟ್ಟೆ,ದಿನಸಿ ನೀಡಿ ಮಾನವೀಯ ನೆರವು

ಕೋಲಾರ:  ಕಾರವಾರದಲ್ಲಿ ನೆರೆಹಾವಳಿಗೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿ ತಾಯಿಯೊಂದಿಗೆ ಆಗಮಿಸಿದ್ದ ಬಾಲಕನಿಗೆ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ನೆರವು ನೀಡಿದರೆ, ಸೈಕಲ್ ಕೊಡುಗೆಯಾಗಿ ನೀಡಿದ ಗ್ರಾಮದ ಮಹೇಂದ್ರ ಮಾನವೀಯತೆ ಮೆರೆದಿದ್ದಾರೆ.
ಕಾರವಾರದಲ್ಲಿ ಇತ್ತೀಚೆಗೆ ನೆರೆಹಾವಳಿಯಿಂದ ಮನೆ ಕಳೆದುಕೊಂಡಿದ್ದ ಬಾಲಕ ಹೇಮಂತ್‌ಕುಮಾರ್, ತನ್ನ ತಾಯಿಯೊಂದಿಗೆ ತೊಟ್ಟ ಬಟ್ಟೆಯಲ್ಲೇ ಅರಾಭಿಕೊತ್ತನೂರಿಗೆ ಬಂದು ಕೂಲಿ ಮೂಲಕ ಜೀವನ ನಡೆಸಲು ಮುಂದಾಗಿದ್ದಾರೆ.
ಈ ಬಾಲಕನ ಬಳಿ ಯಾವುದೇ ಶೈಕ್ಷಣಿಕ ದಾಖಲೆಗಳು ಇಲ್ಲ, ಪುಸ್ತಕ ಸೇರಿ ಎಲ್ಲವೂ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅತಂತ್ರ ಸ್ಥಿತಿಯಲ್ಲಿ ಬಾಲಕ ಬದುಕುವಂತಾಗಿತ್ತು.
ವಿಷಯವರಿತ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಆ ಬಾಲಕನನ್ನು ದಾಖಲೆಗಳಿಲ್ಲದಿದ್ದರೂ, ವಯಸ್ಸಿನ ಆಧಾರ ಹಾಗೂ ಕಲಿಕಾ ಶಕ್ತಿ ಗಮನಿಸಿ ೯ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ದಾಖಲು ಮಾಡಿಕೊಂಡಿದ್ದಾರೆ.
ಜತೆಗೆ ಈ ಬಾಲಕನಿಗೆ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಪುಸ್ತಕ, ಬಟ್ಟೆ, ಮನೆಗೆ ದಿನಸಿ, ಪಾತ್ರೆ ಸಾಮಾನು ಕೊಡುಗೆಯಾಗಿ ನೀಡಿ ನೆರವಿಗೆ ನಿಂತಿದ್ದಾರೆ.
ಇದೇ ಸಂದರ್ಭದಲ್ಲಿ ಶಾಲೆಗೆ ಬಂದ ಗ್ರಾ.ಪಂ ಸದಸ್ಯ ಎ.ಶ್ರೀಧರ್ ಅವರ ಸಹೋದರ ಎ.ಮಹೇಂದ್ರ ತಾನು ೨ ಸಾವಿರ ರೂ ನೀಡುವುದಾಗಿ ತಿಳಿಸಿದ್ದಾರೆ.
ಇದಕ್ಕೆ ಮುಖ್ಯ ಶಿಕ್ಷಕರು ಹಣ ಬೇಡ ಅವನಿಗೆ ಶಾಲೆಗೆ ಬಂದು ಹೋಗಲು ಬೈಸಿಕಲ್ ಕೊಡಿಸಿ ಎಂದು ಹೇಳುತ್ತಿದ್ದಂತೆ ಅದಕ್ಕೂ ಒಪ್ಪಿದ ಮಹೇಂದ್ರ ಬೈಸಿಕಲ್ ಕೊಡುಗೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇದೀಗ ಬಾಲಕ ಶಿಕ್ಷಕರು, ಯುವಮುಖಂಡ ಮಹೇಂದ್ರ ಮತ್ತಿತರರ ನೆರವಿನಿಂದ ತನ್ನ ಶೈಕ್ಷಣಿಕ ಜೀವನ ಮುಂದುವರೆಸುವಂತಾಗಿದ್ದು, ನೆರವಾದವರಿಗೆ ಕೃತಜ್ಞತೆ ಸಲ್ಲಿಸುತ್ತಾನೆ.
ಬೈಸಿಕಲ್ ಕೊಡುಗೆಯಾಗಿ ನೀಡಿದ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ದಾನಿ ಮಹೇಂದ್ರ, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಭವಾನಿ, ಶ್ವೇತಾ, ಸುಗುಣಾ, ಫರೀದಾ, ವೆಂಕಟರೆಡ್ಡಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss