Thursday, July 7, 2022

Latest Posts

ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಗತ್ಯವಿದೆ: ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು

ಗದಗ: ಜಿಲ್ಲೆಯ ಮಲಪ್ರಭಾ, ಬೆಣ್ಣೆಹಳ್ಳ ಹಾಗೂ ತುಂಗಭದ್ರಾ ನದಿ ಪಾತ್ರದ ಜಿಲ್ಲೆಯ ಜನರು ಪದೇಪದೇ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಹೀಗಾಗಿ ಸಂತ್ರಸ್ಥರಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸುವ ಬದಲಾಗಿ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಕಾನ್ಪರೆನ್ಸ್ ಹಾಲ್‌ನಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಅವರು ಮಾತನಾಡಿ, ಮುಂಬರುವ ವರ್ಷಗಳಲ್ಲಿ ಜಿಲ್ಲೆಯಲ್ಲಿ ಅತೀವೃಷ್ಟಿ ಅಥವಾ ಜಲಾಶಯಗಳಿಂದ ನೀರು ಬಿಟ್ಟರೂ ಕಾಳಜಿ ಕೇಂದ್ರ ಹಾಗೂ ತಾತ್ಕಾಲಿಕ ಶೆಡ್ ನಿರ್ಮಿಸುವ ಸಂದರ್ಭ ಎದುರಾಗದಂತೆ
ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದರು.
ಮಲಪ್ರಭಾ, ತುಂಗಭದ್ರಾ ಹಾಗೂ ಬೆಣ್ಣೆಹಳ್ಳ ಉಕ್ಕಿ ಹರಿದರೆ ಜಿಲ್ಲೆಯ ನರಗುಂದ, ರೋಣ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರತಿವರ್ಷ ಪ್ರವಾಹ ಉಂಟಾಗುತ್ತಿದೆ. ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕುವ ಮೊದಲು ಸುರಕ್ಷಿತ ಪ್ರದೇಶಗಳಿಗೆ ಶೀಘ್ರವೇ ಸ್ಥಳಾಂತರಿಸಬೇಕು. ಪದೇ ಪದೇ ನೆರೆ ಹಾವಳಿಗೆ ತುತ್ತಾಗುತ್ತಿರುವ ಗ್ರಾಮದ ಜನರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸೂಕ್ತವಾದ ಜಾಗ ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಈಗಾಗಲೇ ಸಂತ್ರಸ್ಥರಿಗೆ ನಿರ್ಮಿಸಲಾಗಿದ್ದ ಮನೆಗಳ ಹಕ್ಕುಪತ್ರಗಳನ್ನು ಕೆಲವರಿಗೆ ವಿತರಿಸಲಾಗಿದ್ದು, ಇನ್ನುಳಿದವರಿಗೂ ಮನೆಗಳ ಹಕ್ಕುಪತ್ರ ನೀಡಬೇಕು. ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಕಾರ್ಯವನ್ನು ಪ್ರಥಮಾದ್ಯತೆ ಮೇರೆಗೆ ಕೈಗೊಳ್ಳಬೇಕು.ಸದ್ಯ ನದಿಯ ನೀರಿನ ಮಟ್ಟ ಕಡಿಮೆಯಾಗಿದ್ದು, ಪುನಃ ಎಡಬಿಡದೆ ಮಳೆ ಸುರಿದರೆ ನೀರಿನ ಪ್ರಮಾಣ ಹೆಚ್ಚಳವಾಗುವ ಸಾದ್ಯತೆ ಇದೆ. ಸಂತ್ರಸ್ತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ನಿರಂತರ ಮಳೆ ಸುರಿಯುತ್ತಿರುವುದರಿಂದ ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿಯೇ ವಾಸ ಮಾಡುತ್ತಿರುವವರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಕಡಿಮೆ ಇದ್ದು, ಸೋಂಕು ನಿಯಂತ್ರಿಸಲು ಇನ್ನಷ್ಟು ಪರಿಣಾಮಕಾರಿ ಆಗಿ ಕಾರ್ಯನಿರ್ವಹಿಸಬೇಕು. ಪ್ರತಿ ಸೋಂಕಿತರ 10 ಜನ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಶೀಘ್ರ ಕಾರ್ಯ ಆಗಬೇಕು ಎಂದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಸತೀಶ್‌ಕುಮಾರ್ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್ ಎಸ್.ಎನ್., ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾಲೂಕ ಪಂಚಾಯತ್ ಇಒ ಡಾ.ಎಚ್.ಎಸ್.ಜಿನಗಾ ಸೇರಿದಂತೆ ಮುಂತಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss