ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಸುಮಾರು 2000 ಎಕರೆ ಕೃಷಿ ಭೂಮಿಗೆ ನೀರುಣಿಸಲು 45 ಕೋಟಿ ರೂ.ವೆಚ್ಚದ ‘ನೇತ್ರಾವತಿ ನದಿ ಏತ ನೀರಾವರಿ’ ಯೋಜನೆಗೆ ಮಂಜೂರಾತಿ ನೀಡುವಂತೆ ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ ಭಟ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ನೇತ್ರಾವತಿ ನದಿ ದಂಡೆಗೆ ತಾಗಿಕೊಂಡು ಇರುವ ಈ ಬಾಳ್ತಿಲ ಗ್ರಾಮವು ಒಟ್ಟು 3,943 ಎಕರೆಗಳಾಗಿದ್ದು 3272 ಜನಸಂಖ್ಯೆಯನ್ನು ಮತ್ತು 1300 ಕುಟುಂಬಗಳನ್ನು ಹೊಂದಿದೆ.ಈ ಯೋಜನೆ ಅನುಷ್ಠಾನಗೊಂಡರೆ ಇಲ್ಲಿನ ಜನರ ಬಹುದಿನಗಳ ಬೇಡಿಕೆಯು ಈಡೇರಿದಂತಾಗುತ್ತದೆ ಎಂದು ಡಾ.ಭಟ್ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರನ್ನು ಮನವರಿಕೆ ಮಾಡಿತು.
ಹಾಗೆಯೇ ಈ ಯೋಜನೆಯಿಂದ ಈ ಭಾಗದ ರೈತರ ಜಮೀನಿಗೆ ನೇರವಾಗಿ ನೀರನ್ನು ಹರಿಯ ಬಿಡುವುದಲ್ಲದೇ ಕೆರೆ, ಬಾವಿ ಹಾಗೂ ಕೊಳವೆಬಾವಿಗಳ ನೀರಿನ ಮಟ್ಟ ಹಾಗೂ ಒಟ್ಟು ಅಂತರ್ಜಲದ ಮಟ್ಟವು ಮೇಲೇರಲಿದೆ ಹಾಗೂ ಇಡೀ ಗ್ರಾಮ ಹಚ್ಚಹಸಿರಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ನಿಯೋಗದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಹಾಗೂ ಗ್ರಾಮಸ್ಥರಾದ ಗೋಪಾಲ ಶೆಣೈ ಮತ್ತಿತರರಿದ್ದರು.