ಹೊಸ ದಿಗಂತ ವರದಿ, ಅಂಕೋಲಾ:
ನೌಕಾನೆಲೆ ಮತ್ತು ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ೨೫೦ಕ್ಕೂ ಅಧಿಕ ಎಕರೆ ಭೂ ಪ್ರದೇಶ ಅಗತ್ಯವಿದ್ದರೂ ಈಗ ಅದನ್ನು ಕೇವಲ ೮೮ ಎಕರೆಗೆ ಸೀಮಿತಗೊಳಿಸಿರುವ ಮಾಹಿತಿ ಅಧಿಕೃತವಾಗಿ ಹೊರ ಬಂದಿದೆ. ಇದರಿಂದಾಗಿ ಯೋಜನೆಗೆ ಅಂಕೋಲಾ ನಗರ ಮತ್ತು ಸುತ್ತಮುತ್ತಲ ಪ್ರದೇಶ ಒಳಪಡುವ ಭೀತಿಗೆ ತಾತ್ಕಾಲಿಕವಾಗಿ ಬ್ರೆಕ್ ಬಿದ್ದಂತಾಗಿದೆ.
ಸೋಮವಾರ ಬೇಲೇಕೇರಿ ಗ್ರಾ.ಪಂ ಸಮೀಪ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ೨೫೦ ಕ್ಕೂ ಅಧಿಕ ಎಕರೆ ಭೂಮಿಯನ್ನು ನೇವಿಯವರು ಕೇಳಿದ್ದು, ಅಂಕೋಲಾ ತನಕ ಭೂಮಿ ಹೋಗುತ್ತಿತ್ತು. ಆದರೆ ಜಿಲ್ಲಾಧಿಕಾರಿ ಬಹಳ ಕಾಳಜಿ ತೆಗೆದುಕೊಂಡು ನೇವಿ ಜೊತೆ ಮಾತುಕತೆ ನಡೆಸಿ ಯೋಜನಾ ಪ್ರದೇಶ ಕಡಿಮೆ ಮಾಡಿಸಿದ್ದಾರೆ. ಬೇಲೆಕೇರಿ, ಭಾವಿಕೇರಿ, ಅಲಗೇರಿ ಈ ಮೂರು ಪ್ರದೇಶಗಳ ಒಟ್ಟೂ ೮೮ ಎಕರೆ ೧೪ ಗುಂಟೆ ೪ ಆಣೆ ಜಮೀನು ನಿಲ್ದಾಣ ವ್ಯಾಪ್ತಿಗೆ ಒಳಪಡಲಿದ್ದು ೮೧ ಕುಟುಂಬಗಳು ಜಮೀನು ಮತ್ತು ಮನೆ ಕಳೆದುಕೊಳ್ಳಲಿವೆ. ಇದರಲ್ಲಿ ೨೬ ಕುಟುಂಬಗಳು ಎರಡನೇ ಬಾರಿ ಜಮೀನು ಕಳೆದುಕೊಳ್ಳಲಿದ್ದಾರೆ ಎಂದರು.
ಇಷ್ಟೇ ಭೂ ಪ್ರದೇಶ ಸ್ವಾಧೀನವಾಗಲಿದೆ. ಒಂದು ಎಕರೆ ಆಚೆ ಈಚೆ ಬಿಟ್ಟರೆ ಮತ್ತೆ ಭೂಮಿ ಹೋಗುವುದಿಲ್ಲ. ಆನ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಪದೇ ಪದೇ ಒತ್ತಿ ಹೇಳುವ ಮೂಲಕ ಜನರ ಆತಂಕ ದೂರ ಮಾಡುವ ಪ್ರಯತ್ನ ಮಾಡಿದರು.
ಸೀಬರ್ಡ್ ಯೋಜನೆಗಾಗಿ ೩೦೦೦ ಕ್ಕೂ ಅಧಿಕ ಪ್ರದೇಶ ಭೂ ಸ್ವಾಧೀನ ಪಡಿಸಿಕೊಳ್ಳಲು ಅ ಸರ್ವೇಗೆ ಸೂಚನೆ ನೀಡಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ, ಜನ ನಿದ್ದೆ ಬಿಡುವಂತೆ ಆಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಅಧಿಕೃತ ಮಾಹಿತಿ ನೀಡುವ ಉಸಾಬರಿಗೆ ಹೋಗಿರಲಿಲ್ಲ.ಈಗ ಅಪರ ಜಿಲ್ಲಾಧಿಕಾರಿಗಳ ಮಾತು ಮತ್ತೆ ಇಲ್ಲಿ ಭೂ ಸ್ವಾಧೀನ ನಡೆಯದು ಎನ್ನುವ ಬಗ್ಗೆ ಹೊರ ಬಂದ ಮಾಹಿತಿಯೇ ಅಥವಾ ಇದು ಕೇವಲ ನಾಗರಿಕ ವಿಮಾನ ನಿಲ್ದಾಣಕ್ಕಷ್ಟೇ ಸೀಮಿತವಾದ ಭೂ ಸ್ವಾಧೀನವೇ ಎನ್ನುವುದು ಸ್ಪಷ್ಟವಾಗಬೇಕಾಗಿದೆ.
ಸಹಾಯಕ ಆಯುಕ್ತ ಹಾಗೂ ವಿಶೇ? ಭೂಸ್ವಾಧೀನಾಧಿಕಾರಿ ಅಜಿತ ಎಂ ತಹಸೀಲ್ದಾರ್ ಉದಯ ಕುಂಬಾರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ವೈ. ಸಾವಂತ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.