ಹೊಸದಿಗಂತ ವರದಿ ಮೈಸೂರು:
ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ವತಿಯಿಂದ ನ.14ರಿಂದ 20ರವರೆಗೆ 67 ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.
ನಗರದ ಮುಡಾ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕೊರೊನಾ ಸೋಂಕು- ಆತ್ಮನಿರ್ಭರ ಭಾರತ-ಸಹಕಾರ ಸಂಸ್ಥೆಗಳು ಎಂಬ ಧ್ಯೇಯವನ್ನಿಟ್ಟುಕೊಂಡು ಸಪ್ತಾಹ ಆಚರಿಸಲಾಗುತ್ತದೆ ಎಂದು ಹೇಳಿದರು. ಪ್ರತಿವರ್ಷ ನ.14 ರಿಂದ 20 ರವರೆಗೆ ರಾಷ್ಟಾçಧ್ಯಂತ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ನಡೆಯುತ್ತಿದೆ. ಪಂಡಿತ್ ಜವಾಹರಲಾಲ್ ನೆಹರು ಅವರು ಸಹಕಾರ ಕ್ಷೇತ್ರಕ್ಕೆ ನೀಡಿದ ಪ್ರೋತ್ಸಾಹ, ಬೆಂಬಲಕ್ಕಾಗಿ ಅವರ ಹುಟ್ಟುಹಬ್ಬದ ದಿನದಂದು ಸಹಕಾರ ಸಪ್ತಾಹ ವ್ಯವಸ್ಥೆಗೊಳಿಸಲಾಗಿದೆ. ಸಹಕಾರ ಚಳವಳಿಯ ಸಾಧನೆ, ವೈಫಲ್ಯಗಳನ್ನು ಗುರುತಿಸಿ ವಿಮರ್ಶೆ ಚರ್ಚೆಯೊಂದಿಗೆ ಭವಿಷ್ಯದ ಕಾರ್ಯಕ್ರಮಗಳನ್ನು ರೂಪಿಸುವುದಾಗಿದೆ ಎಂದು ತಿಳಿಸಿದರು.
ಈ ವರ್ಷ ಕೊರೊನಾ ಸೋಂಕು-ಆತ್ಮನಿರ್ಭರ ಭಾರತ- ಸಹಕಾರ ಸಂಸ್ಥೆಗಳು ಎಂಬ ಧ್ಯೇಯವನ್ನು ಇಟ್ಟುಕೊಂಡು ಜಿಲ್ಲೆಯಲ್ಲಿ ಸಹಕಾರ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲೆಯ ಎಲ್ಲಾ ಸಹಕಾರ ಸಂಸ್ಥೆಗಳು ತಮ್ಮ ಕಟ್ಟಡದ ಮೇಲೆ ಏಳು ಬಣ್ಣದ ಸಹಕಾರಿ ಧ್ವಜವನ್ನು ಹಾರಿಸುವ ಮೂಲಕ ಸಪ್ತಾಹದ ಆಚರಣೆಗೆ ತಮ್ಮ ಪ್ರೋತ್ಸಾಹ ನೀಡಬೇಕು ಎಂದರು.
ನ.೧೪ರಂದು ಮೈಸೂರಿನ ಸಹಕಾರ ಭವನದ ಆವರಣದಲ್ಲಿ ಕೊರೊನೊತ್ತಾರ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ, ೧೫ರಂದು ಮೈಸೂರು ತಾಲ್ಲೂಕಿನ ಸಹಕಾರ ಸಂಕೀರ್ಣ ಸಭಾಂಗಣದಲ್ಲಿ ಸಹಕಾರಿ ಮಾರಾಟ,ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ, 16 ರಂದು ಎಚ್.ಡಿ.ಕೋಟೆ ಮೈಮುಲ್ ಉಪ ಕಚೇರಿಯಲ್ಲಿ ಅಂತರ್ಜಾಲ ಸಂಪರ್ಕದ ಮೂಲಕ ಸಹಕಾರ ಶಿಕ್ಷಣ ತರಬೇತಿಯ ಪುನರ್ಮನನ, ೧೭ರಂದು ನಂಜನಗೂಡು ತಾಲ್ಲೂಕಿನ ನಗರ್ಲೆ ಪಿಎಸಿಸಿಸ್ನಲ್ಲಿ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು, 18 ರಂದು ನರಸೀಪುರ ತಾಲ್ಲೂಕಿ ಚಾಮನಹಳ್ಳಿ ಪಿಎಸಿಸಿಎಸ್ನಲ್ಲಿ ವ್ಯವಹಾರ, ಉದ್ಯೋಗ ಕಳೆದುಕೊಂಡವರು,ಬಾಧಿತರು ಪುನರುದ್ಯೋಗಸ್ಥರಾಗಲು ಕೌಶಲ್ಯಾಭಿವೃದ್ಧಿ, 19 ರಂದು ಹುಣಸೂರು ತಾಲ್ಲೂಕಿನ ಅಂಕನಹಳ್ಳಿ ಪಿಎಸಿಸಿಎಸ್ನಲ್ಲಿ ಯುವಜನ,ಮಹಿಳಾ ಮತ್ತು ಅಬಲವರ್ಗದವರಿಗೆ ಸಹಕಾರ ಸಂಸ್ಥೆಗಳು, ೨೦ರಂದು ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೆಬಾಗಿಲು ಪಿಎಸಿಸಿಎಸ್ನಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ಡಿಜಿಟಲೈಜೇಷನ್ ಮತ್ತು ಸಾಮಾಜಿಕ ಜಾಲತಾಣ ಕುರಿತ ವಿಷಯದಲ್ಲಿ ಚರ್ಚೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಬಿ.ಎನ್.ಸದಾನಂದ, ಸಹಕಾರ ಸಂಘಗಳ ಉಪ ನಿಬಂಧಕ ಜಿ.ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.