Thursday, August 11, 2022

Latest Posts

ಪಂಜಾಬ್ ಸ್ಥಿತಿ ದುರ್ಬಳಕೆಗೆ ಐಎಸ್‌ಐ ಹೊಂಚು: ಕೇಂದ್ರ ಗೃಹ ಸಚಿವ ಶಾಗೆ ಕಾಂಗ್ರೆಸ್ ಸಂಸದರ ದೂರು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪಂಜಾಬಿನ ಪ್ರಸ್ತುತ ಸನ್ನಿವೇಶ ನನ್ನ ಗಮನದಲ್ಲಿದೆ. ಅಲ್ಲಿನ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಂಜಾಬಿನ ಕಾಂಗ್ರೆಸ್ ಸಂಸದರಿಗೆ ಭರವಸೆ ನೀಡಿದ್ದಾರೆ.
ಗಡಿ ರಾಜ್ಯ ಪಂಜಾಬಿಗೆ ಸಂಬಂಧಿಸಿ ಪಾಕಿಸ್ಥಾನದ ಷಡ್ಯಂತ್ರವೇನೆಂಬುದು ಗೊತ್ತು. ಅಲ್ಲಿನ ಸನ್ನಿವೇಶವನ್ನು ಶೀಘ್ರ ತಿಳಿಗೊಳಿಸದಿದ್ದಲ್ಲಿ ಏನೆಲ್ಲ ಗಂಭೀರ ಸಮಸ್ಯೆಗಳಾದೀತು ಎಂಬುದೂ ತನ್ನ ಅರಿವಿನಲ್ಲಿದೆ ಎಂದು ಶಾ ನಮ್ಮೊಂದಿಗಿನ ಸಭೆಯಲ್ಲಿ ತಿಳಿಸಿದರೆಂದು ಸಂಸದ ಗುರ್ಜೀತ್ ಸಿಂಗ್ ಓಜ್ಲಾ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಮೊದಲು ಹಳಿ ಕ್ಲಿಯರ್ ಮಾಡಿ
ಮೊದಲು ಪ್ರತಿಭಟನಾ ನಿರತ ರೈತರನ್ನು ಹಳಿಗಳಿಂದ ತೆರವುಗೊಳಿಸಿ, ಹಳಿಗಳ ಸುರಕ್ಷೆ ಬಗ್ಗೆ ತಾಂತ್ರಿಕ ವರದಿ ಬಂದ ನಂತರ ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ರೈಲೈ ಸಚಿವ ಪೀಯೂಷ್ ಗೋಯಲ್ ಸಂಸದರಿಗೆ ಮನವರಿಕೆ ಮಾಡಿದ್ದಾರೆ.
ಗೂಡ್ಸ್ ರೈಲುಗಳ ಸಂಚಾರ ಸ್ಥಗಿತ, ರೈತರ ಚಳವಳಿಯಿಂದಾಗಿ ಪಂಜಾಬಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕೇಂದ್ರ ಸರಕಾರ ತುರ್ತಾಗಿ ಮಧ್ಯೆ ಪ್ರವೇಶಿಸದಿದ್ದಲ್ಲಿ ಸನ್ನಿವೇಶದ ದುರ್ಲಾಭವನ್ನು ಪಾಕಿಸ್ಥಾನದ ಐಎಸ್‌ಐ ದುರ್ಬಳಸಿಕೊಳ್ಳುವ ಭೀತಿಯಿದೆ. ರಾಜ್ಯದ ಯುವಕರ ದಾರಿತಪ್ಪಿಸುವ ಆತಂಕವಿದೆ. ಹೀಗಾಗಕೂಡದು. ಪಂಜಾಬ್ ಶಾಂತಿಪ್ರಿಯ ರಾಜ್ಯ ಮತ್ತು ಶಾಂತಿಯುತವಾಗೇ ಮುಂದುವರೆಯಬೇಕು ಎಂದು ಓಜ್ಲಾ, ಜಸ್ಬೀರ್ ಸಿಂಗ್ ಗಿಲ್, ಪ್ರಣೀತ್ ಕೌರ್, ಮನೀಷ್ ತಿವಾರಿ, ರಣ್‌ವೀತ್ ಸಿಂಗ್, ಮೊಹಮ್ಮದ್ ಸಾದಿಕ್ ಸಹಿತ ಬಹುತೇಕ ಎಲ್ಲ ಕಾಂಗ್ರೆಸ್ ಸಂಸದರು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.
ತುಂಬು ನಿರೀಕ್ಷೆ ಇದೆ
ಬಹಳ ಸ್ವಾಸ್ಥ್ಯಪೂರ್ಣ ಮತ್ತು ಧನಾತ್ಮಕ ವಾತಾವರಣದಲ್ಲಿ ಸಭೆ ನಡೆಯಿತು. ಪಂಜಾಬಿಗೆ ಗೂಡ್ಸ್ ರೈಲು ಸಂಚಾರ ಸ್ಥಗಿತಗೊಂಡ ಪರಿಣಾಮ ರಾಜ್ಯದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಇದೀಗ ಗೃಹ ಸಚಿವ ಶಾ ಭರವಸೆ ನೀಡಿರುವ ಕಾರಣ ರೈಲು ಸಂಚಾರ ಶೀಘ್ರ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಸಂಸದ ಜಸ್ಬೀರ್ ಸಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ.
ಪಂಜಾಬಿನ ಸನ್ನಿವೇಶ ಸುಧಾರಿಸಬೇಕೆಂಬುದು ನಮ್ಮ ಆಶಯ. ಕೇಂದ್ರ-ರಾಜ್ಯ ನಡುವಣ ಬಿಕ್ಕಟ್ಟು ಶೀಘ್ರ ಬಗೆಹರಿಯಬೇಕು. ರೈಲು ಸಂಚಾರವಿಲ್ಲದೆ ತುರ್ತು ಸೇವೆಗಳೆಲ್ಲವು ಸಮಸ್ಯೆಗೀಡಾಗಿದೆ. ನೀರು ಪೂರೈಕೆ ವ್ಯವಸ್ಥೆಗೂ ಶೀಘ್ರ ತೊಡಕುಂಟಾಗುವ ಭೀತಿಯಿದೆ. ಪಂಜಾಬ್‌ನಲ್ಲಿ ಪೂರ್ಣ ಕತ್ತಲೆ ಕವಿಯುವ ಮುನ್ನ ಕೇಂದ್ರ ನಮ್ಮ ನೆರವಿಗೆ ಬರಬೇಕು ಎಂಬುದಾಗಿ ಸಂಸದ ಗಿಲ್ ಅಳಲು ತೋಡಿಕೊಂಡಿದ್ದಾರೆ.
ರೈತರ ಚಳವಳಿ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಗೂಡ್ಸ್ ರೈಲು ಬಿಡಲು ಕೇಂದ್ರ ಸರಕಾರ ನಿರಾಕರಿಸಿದ ನಂತರ ರಾಜ್ಯದಲ್ಲಿ ಆವಶ್ಯಕ ಸಾಮಗ್ರಿಗಳ ಕೊರತೆಯಾಗಿದೆ. ವಿದ್ಯುತ್ ಸಮಸ್ಯೆಯಿಂದ ರಾಜ್ಯ ತತ್ತರಿಸುತ್ತಿದೆ ಎಂದು ಆರೋಪಿಸಿ ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಈ ವಾರದ ಆರಂಭದಲ್ಲಿ ದಿಲ್ಲಿಯಲ್ಲಿ ಧರಣಿ ನಡೆಸಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೃಷಿಕರ ಪರವಾಗಿ ಜಾರಿಗೊಳಿಸಿರುವ ಕಾಯಿದೆಗಳನ್ನು ವಿರೋಧಿಸಿ, ಮುಖ್ಯವಾಗಿ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಒತ್ತಡದ ಮೇರೆಗೆ ಪಂಜಾಬ್ ಕಾಂಗ್ರೆಸ್ ಸರಕಾರ ಕಳೆದ ತಿಂಗಳು ನಾಲ್ಕು ಮಸೂದೆಗಳನ್ನು ಅಂಗೀಕರಿಸಿ ಕೇಂದ್ರದ ರೈತಪರ ಮಸೂದೆಗೆ ಸಡ್ಡು ಹೊಡೆದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss