ಹೊಸ ದಿಗಂತ ವರದಿ, ಮಂಗಳೂರು:
ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾಭಿಮಾನದ ಬದುಕು ನಡೆಸುವ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಅಂತ್ಯೋದಯ ಪರಿಕಲ್ಪನೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಕಾರಗೊಳ್ಳುತ್ತಿದೆ. ಆತ್ಮನಿರ್ಭರ್ ಭಾರತ್ ಯೋಜನೆಯಡಿ ಪ್ರಧಾನಮಂತ್ರಿ ಸ್ವನಿಧಿ ಸಾಲ ನಿಧಿ ಯೋಜನೆ ಪೂರ್ಣ ಅನುಷ್ಠಾನಕ್ಕೆ ಬ್ಯಾಂಕ್ಗಳು ತಡೆ ಆಗಬಾರದು ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ದ.ಕ. ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಜಿಲ್ಲೆಯ ಎಲ್ಲ ರಾಷ್ಟ್ರೀಕೃತ, ಖಾಸಗಿ, ಸ್ಥಳೀಯ ಬ್ಯಾಂಕ್ಗಳ ಸಹಯೋಗದೊಂದಿಗೆ ನಗರದ ಪುರಭವನದಲ್ಲಿ ಮಂಗಳವಾರ ನಡೆದ ಆತ್ಮನಿರ್ಭರ್ ಭಾರತ್ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ವಿತರಣೆ, ಇತರ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಯೋಜನೆಗಳಡಿ ಸಾಲ ಮಂಜೂರಾತಿಗೆ ಸಂಬಂಧಿಸಿ ಬ್ಯಾಂಕ್ಗಳಿಗೆ ಹಲವಾರು ಸಮಸ್ಯೆಗಳಿವೆ. ಆದರೆ ಅದಕ್ಕೆ ಪರಿಹಾರವನ್ನು ಬ್ಯಾಂಕ್ಗಳು ಕಂಡುಕೊಳ್ಳಬೇಕು. ಮುದ್ರಾ ಸಾಲ ಯೋಜನೆ ಸೇರಿದಂತೆ ಸಾಲದ ಅರ್ಜಿಗಳನ್ನು ಬ್ಯಾಂಕ್ಗಳು ಸೂಕ್ತ ಕಾರಣಗಳಿಲ್ಲದೆ ತಿರಸ್ಕರಿಸಬಾರದು. ಬೀದಿ ಬದಿ ವ್ಯಾಪಾರಿಗಳಿಗೆ ನೀಡಲಾಗುವ ಸ್ವನಿಧಿ ಯೋಜನೆಯಡಿ ಆಧಾರ್ ಕಾರ್ಡ್ ಹಾಗೂ ಸ್ಥಳೀಯಾಡಳಿತದ ಶಿಫಾರಸು ಪತ್ರವಿದ್ದಲ್ಲಿ ಸಾಲ ಒದಗಿಸಬೇಕು. ಸಾಲ ನೀಡಲು ಸಾಧ್ಯವಾಗದ ಅರ್ಜಿಗಳಿಗೆ ಸಂಬಂಧಿಸಿ ಮನವರಿಕೆ ಮಾಡಬೇಕು. ಪ್ರಧಾನ ಮಂತ್ರಿ ಸ್ವನಿಧಿ ಸಾಲ ಯೋಜನೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಅವರ ಆಶಯ ಹಾಗೂ ಸೂಚನೆಗಳನ್ನು ಬ್ಯಾಂಕ್ಗಳು ಪಾಲಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಸ್ವನಿಧಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ೭೯೨೧ಮಂದಿಗೆ ಸಾಲ ನೀಡುವ ಗುರಿಯಿದ್ದು, ಈಗಾಗಲೇ ೪೧೭೬ ಅರ್ಜಿಗಳು ಸ್ವೀಕರಿಸಲಾಗಿದ್ದು, ೧೬೩೨ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಆಗಿದೆ. ಮುಂದಕ್ಕೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಯೋಜನೆಯಡಿ ಗುರಿ ಸಾಧಿಸುವ ಹೊಣೆಗಾರಿಕೆ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಮೇಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಗ್ರಾಮೀಣ ಪ್ರದೇಶದ ಬ್ಯಾಂಕ್ಗಳಲ್ಲಿ ಭಾಷಾ ಸಮಸ್ಯೆ ಇದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮಾತ್ರ ಗೊತ್ತಿರುವವರು ಬ್ಯಾಂಕ್ನಲ್ಲಿದ್ದಾರೆ. ಇದರಿಂದ ಸ್ಥಳೀಯರಿಗೆ ವ್ಯವಹಾರ ನಡೆಸಲು ಕಷ್ಟವಾಗುತ್ತಿದೆ. ಬ್ಯಾಂಕ್ಗಳಲ್ಲಿ ಕನ್ನಡ ತಿಳಿದಿರುವ ಕನಿಷ್ಠ ಒಬ್ಬನಾದರೂ ಇರಬೇಕು ಎಂದು ನಳಿನ್ ಸೂಚಿಸಿದರು.
ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮಾತನಾಡಿ, ಸಾಲ ಮರು ಪಾವತಿಯಲ್ಲಿ ದ.ಕ. ಜಿಲ್ಲೆಯ ಜನರು ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಪಾರುಪಾವತಿ ಮಾಡುವುದಿಲ್ಲ ಎಂಬ ನೆಪದಲ್ಲಿ ಬ್ಯಾಂಕ್ಗಳು ಬಡವರಿಗೆ, ಬೀದಿ ವ್ಯಾಪಾರಿಗಳಿಗೆ ಸಾಲ ನೀಡಲು ನಿರಾಕರಿಸಬಾರದು. ಡಿಸಿಸಿ ಬ್ಯಾಂಕ್ ಮೂಲಕ ಮೀನು ಮಾರಾಟ ನಡೆಸುವ ೩೦೦ ಮಂದಿ ಮಹಿಳೆಯರಿಗೆ ಸಾಲ ನೀಡಲಾಗುವುದು ಎಂದರು.
ಶಾಸಕ ಡಿ.ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್. ಅಂಗಾರ, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಡಾ. ವೈ. ಭರತ್ ಶೆಟ್ಟಿ, ಹರೀಶ್ ಪೂಂಜ, ಯು.ಟಿ. ಖಾದರ್, ಮೇಯರ್ ದಿವಾಕರ ಪಾಂಡೇಶ್ವರ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಅಧಿಕಾರಿಗಳಾದ ಬ್ಯಾಂಕ್ ಆಫ್ ಬರೋಡಾದ ಸುಜಯ ಶೆಟ್ಟಿ, ಯೂನಿಯನ್ ಬ್ಯಾಂಕ್ನ ಎಂ.ವಿ. ಬಾಲಸುಬ್ರಹ್ಮಣ್ಯಂ, ಎಸ್ಬಿಐನ ರಾಜೇಶ್ ಗುಪ್ತಾ, ಕರ್ನಾಟಕ ಬ್ಯಾಂಕ್ನ ಗೋಕುಲ್ದಾಸ್ ಪೈ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಉಪಸ್ಥಿತರಿದ್ದರು.
ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಸ್ವಾಗತಿಸಿದರು. ಜಿಲ್ಲಾ ಲೀಡ್ ಬ್ಯಾಂಕ್ನ ವ್ಯವಸ್ಥಾಪಕ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.