Monday, August 8, 2022

Latest Posts

ಪಂಡಿತ ದೀನದಯಾಳ್ ಉಪಾಧ್ಯಾಯರ ವಿಚಾರಧಾರೆ , ಆದರ್ಶಗಳು ಇಂದಿಗೂ ಪ್ರಸ್ತುತ: ಗುಜ್ಜಾಡಿ ಪ್ರಭಾಕರ ನಾಯಕ್

ಉಡುಪಿ: ಕಾಂಗ್ರೆಸಿನ ಪಂಚವಾರ್ಷಿಕ ಯೋಜನೆಗಳ ಪರಿಕಲ್ಪನೆಯನ್ನು ವಿರೋಧಿಸಿದ್ದ ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ವಿಚಾರಧಾರೆ ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಅವರ ಚಿಂತನೆಗಳ ಆಧಾರದಲ್ಲಿ ಆಡಳಿತ ನಡೆಸುತ್ತಿದೆ ಎಂದು ಉಡುಪಿ ನಗರಸಭಾ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಭಾನುವಾರ ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಪಕ್ಷದ ಸಂಸ್ಥಾಪಕ ಪಂಡಿತ್ ದೀನದಯಾಳ್ ರವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಂಗ್ರೆಸ್ ಸರಕಾರಗಳ ದೇಶದ ಅಭಿವೃದ್ಧಿ ಹೆಸರಿನಲ್ಲಿ ಅನುಷ್ಠಾನಗೊಳಿಸಿ ಕಾರ್ಯರೂಪಕ್ಕೆ ತಂದ ಪಂಚವಾರ್ಷಿಕ ಯೋಜನೆಗಳಿಂದ ದೇಶದ ಅಗಾಧ ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಿ ನೈಸರ್ಗಿಕ ಅಸಮತೋಲನ ಸೃಷ್ಟಿಯಾಗಿದೆ. ಅಲ್ಲದೆ, ಇಲ್ಲಿ ನೈಸರ್ಗಿಕವಾಗಿ ಮತ್ತು ಅಗ್ಗವಾಗಿ ದೊರಕುವ ಕಚ್ಚಾ ವಸ್ತುಗಳನ್ನು ವಿದೇಶಗಳಿಗೆ ರ್ತು ಮಾಡಿ, ವಿದೇಶಗಳಿಂದ ಉತ್ಪನ್ನಗಳನ್ನು ಹತ್ತು ಪಟ್ಟು ಹೆಚ್ಚು ಬೆಲೆಗೆ ಖರೀದಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70ನೇ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಜನಸೇವಾ ಸಪ್ತಾಹ ಕಾರ್ಯಕ್ರಮಗಳ ಅಂಗವಾಗಿ 30 ಪ್ರಗತಿಪರ ರೈತರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಉಡುಪಿ ನಗರ ಬಿಜೆಪಿ 23ಪ್ರಕೋಷ್ಠಗಳ ಪದಗ್ರಹಣ ನೆರವೇರಿತು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಯಶಪಾಲ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಮನೋಹರ ಕಲ್ಮಾಡಿ, ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಕಾರ್ಯಕಾರಿಣಿ ಸದಸ್ಯೆ ಭಾರತಿ ಚಂದ್ರಶೇಖರ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಕಪ್ಪೆಟ್ಟು, ನಗರ ಸಂಯೋಜಕ ಶಂಕರ ಪೂಜಾರಿ ಮಧ್ವ ನಗರ, ನಗರ ಬಿಜೆಪಿ ಕಾರ್ಯದರ್ಶಿ ದಯಶಿನಿ ಪಂದುಬೆಟ್ಟು, ಮಹಾಶಕ್ತಿ ಕೇಂದ್ರ ಸಂಚಾಲಕರಾದ ರಾಜೇಂದ್ರ ಪಂದುಬೆಟ್ಟು, ವಿಜಯ ಪ್ರಕಾಶ್, ಶಿವಕುಮಾರ್, ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು.
ದಿನೇಶ್ ಅಮೀನ್ ವಂದಿಸಿ, ಮಂಜುನಾಥ್ ಮಣಿಪಾಲ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss