ದಾವಣಗೆರೆ: ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿ, ಪಕ್ಷಕ್ಕೆ ನಿಷ್ಠಾವಂತರಾಗಿರುವ ನಮ್ಮಲ್ಲೇ ಯಾರಾದರೊಬ್ಬರಿಗೆ ಅವಕಾಶ ಮಾಡಿಕೊಡುವಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮನವಿ ಮಾಡಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಜಯಪ್ರಕಾಶ್ ಕೊಂಡಜ್ಜಿ, ಡಾ.ಮಂಜುನಾಥ್ ಗೌಡ, ಹೆಚ್.ಎನ್.ಶಿವಕುಮಾರ್ ಮತ್ತಿತರರು ಮಾತನಾಡಿ, ಇತ್ತೀಚಿಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಚಿದಾನಂದ ಗೌಡ ಎಂಬುವರಿಗೆ ವಿಧಾನ ಪರಿಷತ್ ಸದಸ್ಯ
ವೈ.ಎ.ನಾರಾಯಣಸ್ವಾಮಿ ಶಿಫಾರಸ್ಸಿನ ಮೇರೆಗೆ ಪಕ್ಷ ಮಣೆ ಹಾಕುವುದು ಸರಿಯಲ್ಲ.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದ ಮೂಲ ಬಿಜೆಪಿಗರನ್ನು ಕಡೆಗಣಿಸಬಾರದು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯ ಘಟಕವು ಆಕಾಂಕ್ಷಿಗಳ ಪಟ್ಟಿಯನ್ನು ಕೇಂದ್ರಕ್ಕೆ ಕಳಿಸಿದೆ. ಆದರೆ,
ಪಕ್ಷದಿಂದ ಅಧಿಕೃತವಾಗಿ ಅಭ್ಯರ್ಥಿಯ ಘೋಷಣೆ ಆಗುವುದಕ್ಕೂ ಮುನ್ನವೇ ಚಿದಾನಂದ ಗೌಡ ತಾವೇ ಅಭ್ಯರ್ಥಿ ಎಂಬುದಾಗಿ ಎಲ್ಲರೆದುರು ಹೇಳಿಕೊಂಡು ಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ಕರಪತ್ರಗಳನ್ನೂ ಮುದ್ರಿಸಿ ಹಂಚುತ್ತಿದ್ದಾರೆ. ಹೀಗಾದರೆ ರಾಜ್ಯ ಬಿಜೆಪಿ ಘಟಕಕ್ಕೆ ಅವಮಾನಿಸಿದಂತಾಗುತ್ತದೆ. ಆದ್ದರಿಂದ ಕೂಡಲೇ ಪಕ್ಷದ ವರಿಷ್ಠರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಚಿದಾನಂದರನ್ನೇ ಪಕ್ಷದ ಅಭ್ಯರ್ಥಿಯಾಗಿ
ಘೋಷಣೆ ಮಾಡಿದರೆ ಆಕಾಂಕ್ಷಿಗಳಾದ ನಾವೆಲ್ಲರೂ ಸಭೆ ಸೇರಿ ಮುಂದಿನ ನಡೆ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಡಾ.ಹಾಲನೂರು ಎಸ್.ಲೇಪಾಕ್ಷ, ಸಿ.ಮಲ್ಲಿಕಾರ್ಜುನ, ಪಿ.ಆರ್.ಬಸವರಾಜು, ಡಾ.ಆನಂದ್ ಕಿರಿಶ್ಯಾಳ, ಎಂ.ಶಿವಲಿಂಗಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.