Thursday, August 11, 2022

Latest Posts

ಪಕ್ಷದಿಂದ ಉಚ್ಚಾಟಿಸುವಂತಹ ಕೆಲಸ ಶಾಸಕ ಜಿ.ಟಿ.ದೇವೇಗೌಡರು ಮಾಡಿಲ್ಲ

ಹೊಸ ದಿಗಂತ ವರದಿ, ಮೈಸೂರು:

ಪಕ್ಷದಿಂದ ಉಚ್ಚಾಟಿಸುವಂತಹ ಕೆಲಸವನ್ನು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಮಾಡಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನೇ ಸೋಲಿಸಿದ ದೊಡ್ಡ ಶಕ್ತಿ ಶಾಸಕ ಜಿ.ಟಿ.ದೇವೇಗೌಡರು, ಅಂತಹವರನ್ನು ನಾವ್ಯಾಕೆ ಪಕ್ಷದಿಂದ ಉಚ್ಚಾಟಿಸುತ್ತೇವೆ, ಉಚ್ಛಾಟಿಸುವ ಕೆಲಸ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಜಿ.ಟಿ.ದೇವೇಗೌಡರು ಹೇಳಿದಂತೆ ಜೆಡಿಎಸ್ ಬಳಸಿಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಹಾಯ ಮಾಡಿದವರನ್ನ ಉಚ್ಛಾಟಿಸಬೇಕಲ್ಲವೇ. ಅದ್ಯಾರು ಆ ರೀತಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಅವರ ಬಳಿಯೇ ಮಾಹಿತಿ ಪಡೆಯುತ್ತೇನೆ ಎಂದು ವ್ಯಂಗ್ಯವಾಗಿ ನುಡಿದರು.
ಜಿ.ಟಿ.ದೇವೇಗೌಡರೇ ನಮ್ಮ ನಾಯಕರು. ಮುಂದಿನ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರೇ ಮೈಸೂರು ಭಾಗದ ನಾಯಕತ್ವ ವಹಿಸಿಕೊಳ್ಳುತ್ತಾರೆ. ಅವರಷ್ಟೆ ಅಲ್ಲ ಮುಂದಿನ ಚುನಾವಣೆಯಲ್ಲಿ ಅವರ ಮಗನು ಸ್ಪರ್ಧೆ ಮಾಡುತ್ತಾರೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದಿಂದಲೇ ಅಪ್ಪ ಮಗ ಇಬ್ಬರು ಚುನಾವಣೆಗೆ ನಿಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾನು ಹೇಳ್ತಿದ್ದೇನೆ ಅವರು ಜೆಡಿಎಸ್ ಅಲ್ಲೆ ಇರ್ತಾರೆ. ಚುನಾವಣೆಗು ಮುನ್ನ ಭಿನ್ನಾಭಿಪ್ರಾಯ ಇರೋದು ಜೆಡಿಎಸ್‌ನಲ್ಲಿ ಸಹಜವಾಗಿಬಿಟ್ಟಿದೆ. ಮೊದಲಿನಿಂದಲೂ ಅದು ನಡೆದುಕೊಂಡು ಬಂದಿದೆ ಎಂದರು.
ಚುನಾವಣೆ ಬಂದ ತಕ್ಷಣ ನಾವೆಲ್ಲ ಒಂದಾಗುತ್ತೇವೆ. ಬೇರೆಯವರ ರೀತಿ ಭಿನ್ನಾಭಿಪ್ರಾಯಗಳನ್ನ ಒಳಗಡೆ ಇಟ್ಟುಕೊಳ್ಳಲ್ಲ. ಹೊರಗಡೆ ಮಾತನಾಡಿ ಎಲ್ಲ ಸರಿಪಡಿಸಿಕೊಳ್ಳುತ್ತೇವೆ. ನಮ್ಮ ಪಾರ್ಟಿಯ ಇರೋದೆ ಆ ಥರ. ಜಿ.ಟಿ.ದೇವೇಗೌಡರನ್ನ ಉಚ್ಚಾಟಿಸುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಆಗಲಿ, ನಾನಾಗಲಿ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss