ಹೊಸ ದಿಗಂತ ವರದಿ, ರಾಮನಗರ:
ಪಕ್ಷದ ರೀತಿ ನೀತಿ ಬಿಟ್ಟು ಕೆಲಸ ಮಾಡುವರಿಗೆ ಪಕ್ಷದಲ್ಲಿ ಉಳಿಗಾಲವಿಲ್ಲ. ಬಿಜೆಪಿಯಲ್ಲಿ ಪಕ್ಷ ಶಾಶ್ವತ ಯಾವುದೇ ವ್ಯಕ್ತಿಗಳಲ್ಲ. ನಾನು ಕೂಡ ಒಬ್ಬ ಕಾರ್ಯಕರ್ತನಾಗಿ ಈ ಮಟ್ಟಕ್ಕೆ ಬಂದಿದ್ಧೇನೆ. ಶಿಸ್ತನ್ನು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಹೇಳಿದರು.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಅವರು ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿರುವವರು ಪರವಾಗಿ ಕೆಲವು ದಿನಗಳಿಂದ ಅಲ್ಲಲ್ಲಿ ಕಾರ್ಯಕ್ರಮ ರೂಪಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. “ಬಿಜೆಪಿ ಸಿದ್ದಾಂತಗಳನ್ನು ನೋಡಿ ಜಿಲ್ಲೆಯಲ್ಲಿ ಜನರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಂಬಿಕೆ ಇಟ್ಟು ಮತ ನೀಡಿದ್ದಾರೆ.ಈ ಗೆಲುವು ಕಾರ್ಯಕರ್ತರದ್ದು ಹಾಗೂ ಗೆಲುವು ಸಾಧಿಸಿದ ಅಭ್ಯರ್ಥಿಗಳದ್ದು” ಎಂದರು.
ಸoಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿಗಳು, “ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಮ್ಮ ಕ್ಯಾಪ್ಟನ್. ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಮಾಡುತ್ತಾರೆ” ಎಂದು ಹೇಳಿದರು.
“ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಕರ್ನಾಟಕ ಹೊಸ ಇತಿಹಾಸ ಬರೆದಿದೆ. ಜಿಲ್ಲೆಯಲ್ಲಿ ಶೂನ್ಯದಿಂದ ಬಿಜೆಪಿ ಇಂದು 5 ತಾಲೂಕುಗಳಲ್ಲಿ 234ಕ್ಕೂ ಹೆಚ್ಚು ಕಡೆ ಗೆಲುವು ಸಂಪಾದಿಸಿದೆ. ಇದಕ್ಕೆ ಕಾರಣೀಕರ್ತರಾದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೂ ಅಭಿನಂದನೆಗಳು” ಎಂದು ಹೇಳಿದ್ದರು.
ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಹುಲವಾಡಿ ದೇವರಾಜ್, ಬಿಜೆಪಿ ಮಾದ್ಯಮ ಪ್ರಮುಖ ಚಂದ್ರಶೇಖರ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು ಹಾಗೂ ಮುಂತಾದವರು ಉಪಸ್ಥಿತರಿದ್ದರು.