Sunday, July 3, 2022

Latest Posts

ಪಚ್ಚನಾಡಿ ತ್ಯಾಜ್ಯ ದುರಂತ: ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ವಿತರಣೆ

ಹೊಸದಿಗಂತ ವರದಿ, ಮಂಗಳೂರು:

ಪಚ್ಚನಾಡಿ ತ್ಯಾಜ್ಯ ದುರಂತ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಶೀಘ್ರ ಪ್ರಕ್ರಿಯೆಗಳನ್ನು ನಡೆಸಿ ಮಧ್ಯಂತರ ಪರಿಹಾರಕ್ಕೆ ಹೈಕೋರ್ಟ್ ಆದೇಶಿದೆ. ಅದರಂತೆ ಮಧ್ಯಂತರ ಪರಿಹಾರ ನೀಡಲಾಗುತ್ತಿದ್ದು, ಯಾವುದೇ ರೀತಿಯ ಆಕ್ಷೇಪ, ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ವಕೀಲರ ಗಮನಕ್ಕೆ ತರಬಹುದು. ಶೀಘ್ರ ನೆರವು ಕೊಡಲು ನಾವು ಸದಾ ಸಂತ್ರಸ್ತರ ಜತೆಗಿದ್ದೇವೆ ಎಂದು ಜಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಶಿಲ್ಪಾ ಹೇಳಿದರು.
ಪಚ್ಚನಾಡಿಯಲ್ಲಿ ೨೦೧೯ರ ಆಗಸ್ಟ್‌ನಲ್ಲಿ ಭಾರಿ ಮಳೆಯ ಸಂದರ್ಭ ಸಂಭವಿಸಿದ ತ್ಯಾಜ್ಯ ದುರಂತದ ೪೫ ಮಂದಿ ಸಂತ್ರಸ್ತರಿಗೆ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾ ನ್ಯಾಯಾಲಯದ ಹಳೆ ಕಟ್ಟಡದ ಸಭಾಂಗಣದಲ್ಲಿ ಗುರುವಾರ ಮಧ್ಯಂತರ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ಕೆಲ ತಿಂಗಳ ಹಿಂದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರ ಜತೆ ಸ್ಥಳಕ್ಕೆ ತೆರಳಿದಾಗ ಪಚ್ಚನಾಡಿ ತ್ಯಾಜ್ಯ ದುರಂತ ಸ್ಥಳ, ಅಲ್ಲಿನ ದುರ್ವಾಸನೆ, ಅಲ್ಲಿನ ಸನ್ನಿವೇಶ ಕಂಡು ಭಯಭೀತರಾಗಿದ್ದೆವು. ಅದರಂತೆ ಅಲ್ಲಿ ಸುಮಾರು ಒಂದು ತಿಂಗಳ ಅಧ್ಯಯನ ನಡೆಸಿ ದಾಖಲೆಗಳನು ಸಂಗ್ರಹಿಸಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ವರದಿ ಆಧಾರದ ಮೇರೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಅದನ್ನು ಕೈಗೆತ್ತಿಕೊಂಡ ನ್ಯಾಯಾಲಯದ ಇದೀಗ ಮಧ್ಯಂತರ ಪರಿಹಾರಕ್ಕೆ ತೀರ್ಪು ನೀಡಿದ್ದು, ಅದರಂತೆ ಜಿಲ್ಲಾಧಿಕಾರಿ, ಮನಪಾ ಆಯುಕ್ತರು ಹಾಗೂ ಸಂತ್ರಸ್ತರ ಸಭೆ ನಡೆಸಿ ಪರಿಹಾರ ನಿಗದಿಪಡಿಸಲಾಗಿದೆ. ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಸಮರ್ಪಕವಾಗಿಲ್ಲ ಎಂದಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಅವರು ಹೇಳಿದರು.
ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಮಾತನಾಡಿ, ಈಗಾಗಲೇ ಬೆಳೆ ಪರಿಹಾರವಾಗಿ ಸಂತ್ರಸ್ತರಿಗೆ ೨.೫ ಕೋಟಿ ರೂ.ಗಳನ್ನು ವಿತರಿಸಲಾಗಿತ್ತು. ಇದೀಗ ೪೫ ಮಂದಿಗೆ ಒಟ್ಟು ೧೪ ಕೋಟಿ ರೂ.ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದರು.
ಸ್ಥಳೀಯ ಪಾಲಿಕೆ ಸದಸ್ಯರಾದ ಸಂಗೀತಾ, ಭಾಸ್ಕರ ಕೆ., ವಕೀಲರಾದ ಚಂದ್ರಹಾಸ ಕೊಟ್ಟಾರಿ, ಅನಿತಾ ಕಿಣಿ, ಗೌರಿ ಕೆ.ಎಸ್. ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss