ಹೊಸ ದಿಗಂತ ವರದಿ, ಮಂಗಳೂರು:
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಈ ಸಂದರ್ಭ ದಿಢೀರ್ ಆಗಿ ಪಟಾಕಿ ನಿಷೇಧ ಮಾಡಿದರೆ ಸಾಲ ಮಾಡಿ ವ್ಯಾಪಾರಕ್ಕೆ ಮುಂದಾಗಿರುವ ವ್ಯಾಪಾರಸ್ಥರಿಗೆ ಭಾರಿ ತೊಂದರೆಯಾಗಲಿದೆ. ಆದ್ದರಿಂದ ಸರ್ಕಾರ ತಕ್ಷಣ ಪಟಾಕಿ ನಿಷೇಧಕ್ಕೆ ಮುಂದಾಗಬಾರದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನೆಪವೊಡ್ಡಿ ತಜ್ಞರ ಸಮಿತಿ ಶಿಫಾರಸಿನಂತೆ ಪಟಾಕಿ ನಿಷೇಧಿಸುವ ಬಗ್ಗೆ ಮುಖ್ಯಮಂತ್ರಿಗಳು ಕಾರಣ ನೀಡಿದ್ದಾರೆ. ಈ ಬಗ್ಗೆ ಸರ್ಕಾರ ಸಾಕಷ್ಟು ಮೊದಲೇ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಪಟಾಕಿ ಮಾರಾಟಕ್ಕೆ ಅವಕಾಶ ನೀಡಿ, ಈಗ ಏಕಾಏಕಿ ಮಾರಾಟ ನಿರ್ಬಂಧಿಸಿದರೆ, ಇದರಿಂದ ಮಾರಾಟಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದರು.
ಸರ್ಕಾರ ಲವ್ಜಿಹಾದ್ ಹಾಗೂ ಮತಾಂತರ ನಿಷೇಧ ಬಗ್ಗೆ ಕಠಿಣ ಕಾನೂನು ತರಲು ಮುಂದಾಗಿರುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ ಜನಪರವಾದ ಕಾನೂನು ಹಾಗೂ ತೀರ್ಮಾನಗಳನ್ನು ಸರ್ಕಾರ ಕೈಗೊಳ್ಳಬೇಕು. ಕಾನೂನು ಜಾರಿಗೊಳಿಸುವುದರ ಹಿಂದೆ ದುರುದ್ದೇಶ ಇರಬಾರದು ಎಂದು ಶಾಸಕ ಖಾದರ್ ಹೇಳಿದರು.