ಹೊಸ ದಿಗಂತ ವರದಿ, ಚಿತ್ರದುರ್ಗ
ಪಟಾಕಿ ಹಚ್ಚುವುದರಿಂದ ಕಣ್ಣು ಕಿವಿ ಸಾವು ದುರಂತಗಳು ಸಂಭವಿಸುತ್ತವೆ. ಹಾಗಾಗಿ ಪಟಾಕಿ ತ್ಯಜಿಸಿ ದೀಪ ಬೆಳಗಿಸಿ ದೀಪಾವಳಿ ಆಚರಿಸಬೇಕೆಂದು ಕಬೀರಾನಂದಮಠದ ಶಿವಾಲಿಂಗಾನಂದ ಸ್ವಾಮೀಜಿ ಕರೆ ನೀಡಿದರು.
ನಗರದ ಹೊರವಲಯದಲ್ಲಿರುವ ಆಡು ಮಲ್ಲೇಶ್ವರ ಅರಣ್ಯ ಚೆಕ್ ಪೋಸ್ಟ್ ಬಳಿ ಹಿಮಂತ ಮಹಿಳಾ ವಿಕಾಸ ಸಂಸ್ಥೆ, ಮಾರ್ಗ ಅಡ್ವೆಂಚರ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಪಟಾಕಿ ರಹಿತ ದೀಪಾವಳಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟಾಕಿ ಹಚ್ಚುವುದು ನಮ್ಮ ಸಂಸ್ಕೃತಿಯಲ್ಲ ಯಾವ ಆಚರಣೆಗಳು ಪಟಾಕಿ ಸಿಡಿಸಿ ಪರಿಸರವನ್ನು ಹಾಳು ಮಾಡುವಂತೆ ಹೇಳಿಲ್ಲ ಕೇವಲ ಮೋಜು ಇನ್ನೀತರೆ ಢಾಂಬಿಕ ಆಚರಣೆಗೆ ಕೆಲವರು ಮಾರುಹೋಗಿ ಪರಿಸರವನ್ನು ನಾಶಮಾಡುತ್ತಿದ್ದೇವೆ ಮನುಕುಲಕ್ಕೆ ಮಾರಕವಾಗುವ ಆಚರಣೆಗಳಿಗೆ ಕಡಿವಾಣ ಹಾಕಬೇಕು ಪಟಾಕಿ ಹಚ್ಚುವುದರ ಬದಲಾಗಿ ದೀಪ ಬೆಳಗಿಸಿ ನಮ್ಮ ಸಂಸ್ಕೃತಿಯನ್ನು ಉಳಿಸಬೇಕೆಂದು ತಿಳಿಸಿದರು.
ಮಧುಗಿರಿ ಸಾರ್ವಜನಿಕ ಶಿಕ್ಷಣಾಧಿಕಾರಿ ಎಂ.ರೇವಣಸಿದ್ದಪ್ಪ, ನಿವೃತ್ತ ಜಂಟಿ ನಿರ್ದೇಶಕ ಮಂಜುನಾಥ್, ಉಪನ್ಯಾಸಕ ಡಾ.ರಾಜೀವಲೋಚನಾ, ಡಾ.ಬಸಂತಪ್ಪ, ಡಾ.ತಿಪ್ಪೇಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷೆ ಶಾಂತಮ್ಮ, ಮಾರ್ಗ ಅಡ್ವೆಂಚರ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಮಾತನಾಡಿದರು.
ಹಿಮಂತ ಮಹಿಳಾ ವಿಕಾಸ ಸಂಸ್ಥೆ ಕಾರ್ಯದರ್ಶಿ ಹೆಚ್.ಎನ್. ವರಲಕ್ಷ್ಮಿ, ಕಲಾವಿದ ಡಿ.ಓ.ಮುರಾರ್ಜಿ, ಮಾರ್ಗ ಅಡ್ವೆಂಚರ್ ಕ್ಲಬ್ ಉಪಾಧ್ಯಕ್ಷ ಉದಯ್ ಆರ್, ಕಾರ್ಯದರ್ಶಿ ಮನೋಹರ್, ಸದಸ್ಯರಾದ ವಿನಯ್, ಭದ್ರ, ಕುಶಾಲ್, ಹಿಮಂತ ಮಹಿಳಾ ವಿಕಾಸ ಸಂಸ್ಥೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.