Monday, August 15, 2022

Latest Posts

ಪಟೇಲ್ ತೋಟದಲ್ಲಿ ಯುವತಿಯ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಉಡುಪಿ: ಏಳು ವರ್ಷಗಳ ಹಿಂದೆ ಕಡೆಕಾರು ಗ್ರಾಮದ ಪಟೇಲ್ ತೋಟದಲ್ಲಿ ಯುವತಿಯ ಕೊಲೆಗೈದ ಪ್ರಕರಣದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ.
ಪಟೇಲ್ ತೋಟದ ನಿವಾಸಿ ಯೋಗೀಶ್ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಆತ ಮನೆಯ ಸಮೀಪದಲ್ಲಿ ವಾಸವಿದ್ದ ರಂಜಿತಾ (19) ಎಂಬವರನ್ನು ಪ್ರೀತಿಸುವಂತೆ ಆಗಾಗ ಪೀಡಿಸಿ ಕಿರುಕುಳ ನೀಡುತ್ತಿದ್ದ. ಯುವತಿ ವಿರೋಧಿಸಿದಾಗ ಜೀವ ಬೆದರಿಕೆಯೊಡ್ಡಿದ್ದ. ಆರೋಪಿಯ ದೌರ್ಜನ್ಯ ಸಹಿಸದ ಯುವತಿ 2013ರ ಸೆ. 28ರಂದು ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದಳು.
2013ರ ನ.27ರಂದು ಬೆಳಗ್ಗೆ ರಂಜಿತಾ ಗೆಳತಿಯೊಂದಿಗೆ ಮಾತಾಡುತ್ತಿದ್ದಾಗ, ಯೋಗೀಶ್ ಚೂರಿಯಿಂದ ರಂಜಿತಾಗೆ ಮಾರಣಾಂತಿಕವಾಗಿ ಇರಿದು ಪರಾರಿಯಾಗಿದ್ದ. ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ರಂಜಿತಾ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಳು. ಮಲ್ಪೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಅಂದಿನ ವೃತ್ತ ನಿರೀಕ್ಷಕ ಮಾರುತಿ ಜಿ.ನಾಯ್ಕ್ ಪ್ರಕರಣದ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಇದೀಗ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜೆ.ಸುಬ್ರಹ್ಮಣ್ಯ ಅವರು ಸೋಮವಾರ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದ್ದರು. ಬುಧವಾರ ಜೀವಿತಾವಧಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದ ಮಂಡಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss