ಪಡಿತರ ಚೀಟಿ ತಾಂತ್ರಿಕ ದೋಷ ಪರಿಹಾರ: ಸಚಿವ ಕೆ. ಗೋಪಾಲಯ್ಯ

0
115

ಬೆಂಗಳೂರು: ಪಡಿತರ ಚೀಟಿ ಪಡೆಯಲು ಆಗುತ್ತಿರುವ ತಾಂತ್ರಿಕ ದೋಷ ಪರಿಹರಿಸಲು ಬುಧವಾರ ಅಧಿಕಾರಿಗಳ ಸಭೆ ಕರೆದಿದ್ದು, ಶೀಘ್ರವೇ ಪಡಿತರ ಕಾರ್ಡ್ ವಿತರಣೆಗೆ ಸುಲಲಿತವಾಗಿ ನಡೆಯುವಂತೆ ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಅವರು ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಮಧ್ಯಾಹ್ನದ ನಂತರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಾಂತ್ರಿಕ ದೋಷದಿಂದಾಗಿ ಜನವರಿ ತಿಂಗಳಲ್ಲಿ ಹೊಸ ಪಡಿತರ ಚೀಟಿ ವಿತರಣೆ, ವರ್ಗಾವಣೆ, ವಿಳಾಸ ಬದಲಾವಣೆ, ತಿದ್ದುಪಡಿ, ಹೆಸರು ಸೇರ್ಪಡೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ವರ್ ಸಮಸ್ಯೆ ಬಗೆಹರಿಸಲಾಗಿದೆ. ಹೆಚ್ಚುವರಿ ಯಾಗಿ ಸರ್ವರ್‌ವೊಂದನ್ನು ಅಳವಡಿಸಲಾಗಿದೆ. ಫೆಬ್ರವರಿ ತಿಂಗಳಲ್ಲಿ ಹೊಸಪಡಿತರ ಚೀಟಿ ವಿತರಣೆ ಸೇರಿದಂತೆ ಇತರ ಕಾರ್ಯಗಳು ಸುಸೂತ್ರವಾಗಿ ನಡೆಯಲು ಯಾವುದೇ ಸಮಸ್ಯೆ ಇಲ್ಲ ಎಂದರು.

ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಎಸ್.ರವಿ ಅವರು, ಈವರೆಗೂ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಒಂದು ವರ್ಷದ ಹಿಂದೆ ಅನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಪಡಿತರ ಚೀಟಿ ಯಾರಿಗೂ ಬಂದಿಲ್ಲ. ಪಡಿತರ ಆಹಾರ ಧಾನ್ಯ ವಿತರಣೆಯಾಗುತ್ತಿದೆ. ಆದರೆ, ಪಡಿತರ ಕಾರ್ಡ್‌ಗಳು ಸಿಕ್ಕಿಲ್ಲ. ಇಂದಿನ ದಿನಗಳಲ್ಲಿ ಸ್ಥಳೀಯ ಗುರುತಿಗಾಗಿ ಪಡಿತರ ಕಾರ್ಡ್ ತುಂಬಾ ಮಹತ್ವವಿದೆ. ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬುಧವಾರ ಅಧಿಕಾರಿಗಳ ಸಭೆ ಕರೆದು, ಕಾರ್ಡುಗಳು ಸಿಗದವರಿಗೆ ಶೀಘ್ರವೇ ಪಡಿತರ ಕಾರ್ಡು ವಿತರಣೆ ಮಾಡುವ ಕ್ರಮ ಕೈಗೊಳ್ಳುತ್ತೇನೆ. ಹಾಗೆಯೇ ಅನಿಲ ಸಂಪರ್ಕ ಹೊಂದಿರುವ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿದಾರರು ಒಂದು ಲೀಟರ್ ಸೀಮೆ ಎಣ್ಣೆ ಪಡೆಯಲು ನೋಂದಣಿ ಮಾಡಿದ್ದಲ್ಲಿ ಪ್ರತಿ ತಿಂಗಳು ಯಾವುದೇ ಸಮಸ್ಯೆಗಳಿಲ್ಲದೆ 35 ರೂ.ದರದಲ್ಲಿ ಸೀಮೆಎಣ್ಣೆ  ವಿತರಣೆ ಮಾಡಲಾಗುವುದು. ಆದರೆ, ಅವರು ಸೀಮೆಎಣ್ಣೆ ಪಡೆಯುವಾಗ ಬೆರಳಚ್ಚು ನೀಡುವುದು ಕಡ್ಡಾಯ ಎಂದರು.

ಅಕ್ರಮ ಪಡಿತರ ಚೀಟಿ: ಕ್ರಿಮಿನಲ್ ಕೇಸ್: ಅಕ್ರಮ ಪಡಿತರ ಚೀಟಿ ಪಡೆದಿರುವವರು ಏಪ್ರಿಲ್ ಒಳಗೆ ಮರಳಿಸಬೇಕು , ಇಲ್ಲವಾದರೆ, ಅವರ ವಿರುದ್ಧ ದಂಡ ಸಹಿತ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ಕಾರ ನಿರ್ಧರಿಸಿದೆ.
ರಾಜ್ಯಾದ್ಯಂತ  ಮೇ 2019 ರಿಂದ ಈವರೆಗೆ ಸುಮಾರು 63,922 ಅನರ್ಹ ಪಡಿತರ ಚೀಟಿ ಪತ್ತೆ ಹಚ್ಚಲಾಗಿದೆ. ಈ ಪೈಕಿ ಬೆಂಗಳೂರು ನಗರದ ಹೆಚ್ಚು ಅಂದರೆ, 8,308 ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆ. ಈ ಎಲ್ಲ ಅಕ್ರಮ ಕಾರ್ಡ್‌ಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ.

ವಿಜಯಪುರ ದಲ್ಲಿ 6,297 ಅಕ್ರಮ ಪಡಿತರರು, ಇನ್ನುಳಿದಂತೆ ಚಿಕ್ಕಬಳ್ಳಾಪುರ, ಹಾಸನ, ಕೋಲಾರ , ಹಾವೇರಿ, ಶಿವಮೊಗ್ಗ, ಧಾರವಾಡ, ಬಳ್ಳಾರಿ, ಕಲಬುರಗಿ, ಮೈಸೂರು, ಬೆಳಗಾವಿ, ಮಂಡ್ಯದಲ್ಲಿ ಕೂಡ ಅಕ್ರಮ ಪಡಿತರ ಚೀಟಿಯನ್ನು ಪತ್ತೆ ಹಚ್ಚಿ ರದ್ದು ಗೊಳಿಸಲಾಗಿದೆ. ರಾಜ್ಯದಲ್ಲಿ ಅನುಕೂಲಸ್ಥರು ಬಿಪಿಎಲ್ ಕಾರ್ಡ್ ಹೊಂದಿರುವ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಏಪ್ರಿಲ್ ತಿಂಗಳೊಳಗೆ ಅಕ್ರಮವಾಗಿ ಪಡೆದಿರುವ ತಮ್ಮ ಪಡಿತರ ಚೀಟಿಯನ್ನು  ವಾಪಸ್ ಮಾಡಬೇಕು. ಇಲ್ಲದಿದ್ದರೆ ಮೇನಿಂದ ದಂಡ ವಿಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ಕಾರ ನಿರ್ಧರಿಸಿದೆ. ಅಕ್ರಮ ಪಡಿತರ ಚೀಟಿ ಪತ್ತೆಗಾಗಿ ಆಧಾರ್ ಲಿಂಕ್ ಮಾಡಿ ಇ- ಕೆವೈಸಿ ನೊಂದಣಿ ಪ್ರಕ್ರಿಯೆಯನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಆಧಿಕಾರಿಗಳಿಗೆ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here