Monday, August 8, 2022

Latest Posts

ಪಡುಬಿದ್ರೆ ಬೀಚ್‌ಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಗೆ ಇನ್ನು ಒಂದು ಹೆಜ್ಜೆ!

ಉಡುಪಿ: ಜಿಲ್ಲೆಯ ಪಡುಬಿದ್ರೆ ಬೀಚ್‌ಗೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಗೆ ಇನ್ನು ಒಂದು ಹೆಜ್ಜೆ ಮಾತ್ರ ಇದ್ದು, ಶೀಘ್ರದಲ್ಲಿ ಪಡುಬಿದ್ರೆ ಬೀಚ್‌ಗೆ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಶುಕ್ರವಾರ ಪಡುಬಿದ್ರೆಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಕೇಂದ್ರ ಸರಕಾರದ ಸ್ವಚ್ಛತಾ ಅಭಿಯಾನದ ಮುಂದುವರೆದ ಭಾಗವಾಗಿ ನಡೆದ ’ಐ ಆ್ಯಮ್ ಸೇವಿಂಗ್ ಮೈ ಬೀಚ್’ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ 13ಬೀಚ್‌ಗಳನ್ನು ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಗೆ ಅಭಿವೃದ್ಧಿಪಡಿಸಿದ್ದು, ಅದರಲ್ಲಿ ಎಲ್ಲ ಅಗತ್ಯ ನಿಯಮಗಳ ಪಾಲನೆ ಮತ್ತು ಗುಣಮಟ್ಟ ಹೊಂದಿರುವ 8 ಬೀಚ್‌ಗಳನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಿ ಅಂತಾರಾಷ್ಟ್ರೀಯ ಜ್ಯೂರಿಗೆ ಕಳುಹಿಸಿದೆ. ಅದರಲ್ಲಿ ಪಡುಬಿದ್ರೆ ಬ್ಲೂ ಫ್ಲ್ಯಾಗ್ ಬೀಚ್ ಸಹ ಸೇರಿದೆ. ಈ ಬೀಚ್‌ಗಳಿಗೆ ಸದಸ್ಯದಲ್ಲಿಯೇ ಇಂಟರ್‌ನ್ಯಾಷನಲ್ ಜ್ಯೂರಿ ತಂಡ ಪರಿಶೀಲನೆಗೆ ಆಗಮಿಸಲಿದ್ದು, ಪಡುಬಿದ್ರೆ ಬೀಚ್ ಎಲ್ಲ ಅರ್ಹತೆಗಳನ್ನು ಹೊಂದಿದ್ದು, ಬ್ಲೂ ಫ್ಲ್ಯಾಗ್ ಬೀಚ್ ಸರ್ಟಿಫಿಕೇಶನ್‌ನ ದೊರೆಯುವ ವಿಶ್ವಾಸ ಇದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಹೇಳಿದರು.
ಸ್ವಚ್ಛತೆ, ಸುರಕ್ಷತೆ, ಪರಿಸರ ರಕ್ಷಣೆ, ನೀರಿನ ಗುಣಮಟ್ಟ ಮುಂತಾದ ಷರತ್ತುಗಳಿಗೊಳಪಟ್ಟು ಬ್ಲೂ ಫ್ಲ್ಯಾಗ್ ಮಾನ್ಯತೆ ದೊರೆಯಲಿದೆ. ಪಡುಬಿದ್ರೆಯ ಬೀಚ್‌ನ ಈ ಎಲ್ಲ ಷರತ್ತುಗಳ ಆಧಾರದಲ್ಲಿ ಅಭಿವೃದ್ಧಿಪಡಿಸಿದ್ದು, ಇಲ್ಲಿನ ಸಮುದ್ರದ ನೀರಿನ ಗುಣಮಟ್ಟ ಅತ್ಯಂತ ಶುದ್ಧ ಎಂಬ ವರದಿ ಬಂದಿದೆ. ಈ ಪ್ರದೇಶವನ್ನು ಇನ್ನೂ ಹೆಚ್ಚು ಅಭಿವೃದ್ಧಿಗೊಳಿಸಲು ರಾಜ್ಯ ಸರಕಾರಕ್ಕೆ 5 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೀಚ್ ಅಭಿವೃದ್ಧಿಯಿಂದ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದು ಡಿಸಿ ತಿಳಿಸಿದರು.
ಐ ಆ್ಯಮ್ ಸೇವಿಂಗ್ ಮೈ ಬೀಚ್ ಧ್ವಜಾರೋಹಣ ನೆರವೇರಿಸಿದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬ್ಲೂ ಫ್ಲ್ಯಾಗ್ ಮಾನ್ಯತೆ ಹೊಂದುವ ಹಾದಿಯಲ್ಲಿರುವ ಬೀಚ್ ಇದಾಗಿದೆ. ಪ್ರಧಾನಿಯವರ ಸ್ವಚ್ಛ ಭಾರತ ಕಲ್ಪನೆಯಡಿಯಲ್ಲಿ ಬೀಚ್ ಅಭಿವೃದ್ಧಿಯಾಗುತ್ತಿದೆ. ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ, ಪರಿಸರ ರಕ್ಷಣೆಯೊಂದಿಗೆ ಇಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ.ಪಂ. ಸದಸ್ಯ ಶಶಿಕಾಂತ ಪಡುಬಿದ್ರೆ, ತಾ.ಪಂ. ಸದಸ್ಯೆ ನೀತಾ ಗುರುರಾಜ್, ಕಾಪು ತಹಶೀಲ್ದಾರ್ ಮೊಹಮದ್ ಇಸಾಕ್, ಎಸಿಟಿಯ ಮನೋಹರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಗೆ ಅಂತಾರಾಷ್ಟ್ರೀಯ ಜ್ಯೂರಿಗೆ ಕಳುಹಿಸಿರುವ 8 ಕಡಲತೀರದಲ್ಲಿ, ಏಕಕಾಲಕ್ಕೆ ವೆಬಿನಾರ್ ಮೂಲಕ ಐ ಆ್ಯಮ್ ಸೇವಿಂಗ್ ಮೈ ಬೀಚ್ ಧ್ವಜಾರೋಹಣ ನಡೆಯಿತು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕ್ ಸ್ವಾಗತಿಸಿ, ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss