Sunday, June 26, 2022

Latest Posts

ಪತ್ರಕರ್ತರಿಗೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಸಲಹೆ: ಸಮಾಜಮುಖಿ ಕಾರ್ಯಗಳಿಗೆ ನೀಡಿ ಆದ್ಯತೆ

ಮಂಗಳೂರು: ರಾಜಕೀಯ ವರದಿಗಳಿಂದ ಜನತೆ, ಸಮಾಜಕ್ಕೆ ಪ್ರಯೋಜನವಿಲ್ಲ. ರಾಜಕೀಯ ವರದಿಗಳಿಗೆ ಕಡಿಮೆ ಆದ್ಯತೆ ನೀಡಬೇಕು. ಯೋಜನೆ, ಸಮಾಜ ಮುಖಿ ಕಾರ್ಯಕ್ರಮಗಳತ್ತ ಪತ್ರರ್ಕತರು ಬೆಳಕು ಚೆಲ್ಲಬೇಕು. ಆ ಮೂಲಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸ ಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಇಲ್ಲಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರಾಜ್ಯ ಪತ್ರಕರ್ತರ ಎರಡು ದಿನಗಳ ೩೫ನೆಯ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾಗತೀಕರಣದ ಪರಿಣಾಮ ಪತ್ರಿಕೋದ್ಯಮದ ಮೇಲೆಯೂ ಬಿದ್ದಿದೆ. ಇಂದು ಪತ್ರಿಕೋದ್ಯಮದಲ್ಲಿ ಹಣ ಪ್ರಮುಖವಾಗಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ಸವಾಲುಗಳ ಮಧ್ಯೆ ಕರ್ತವ್ಯ ನಿರ್ವಹಿಸಬೇಕಿದೆ. ಮೌಲ್ಯಾಧಾರಿತ ಪತ್ರಿಕೋದ್ಯಮ ಎಂಬುದು ದಿನನಿತ್ಯದ ತಪಸ್ಸು ಆಗಬೇಕು. ಸವಾಲುಗಳ ಮಧ್ಯೆ ವಸ್ತುನಿಷ್ಠ ಪತ್ರಿಕೋದ್ಯಮವನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ಮಾಧ್ಯಮ ಪ್ರತಿನಿಧಿಗಳ ಮೇಲಿದೆ ಎಂದು ಉಪ ಮುಖ್ಯಮಂತ್ರಿಗಳು ನುಡಿದರು.
ಆಧುನಿಕ ತಂತ್ರಜ್ಞಾನದ ಬೆಂಬಲ:
ಆಧುನಿಕ ತಂತ್ರಜ್ಞಾನದ ಬೆಂಬಲವನ್ನು ಪತ್ರಕರ್ತರು ಮತ್ತು ಪತ್ರಿಕಾ ಸಂಸ್ಥೆಗಳಿಗೆ ನೀಡಲು ಸರಕಾರ ಬದ್ಧವಾಗಿದೆ. ಪತ್ರಕರ್ತರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ನುಡಿದರು.
ಧರ್ಮವಾಗಿರಲಿ: ಸಂಧ್ಯಾ ಪೈ:
ಭವಿಷ್ಯದಲ್ಲಿ ಪತ್ರಿಕೆ ಎಂಬುದು ಉದ್ಯಮವಾಗಿರದೆ ಧರ್ಮ ವಾಗಿರಲಿ ಎಂದು ಆಶಯ ಭಾಷಣ ಮಾಡಿದ ತರಂಗ ಸಂಪಾದಕಿ ಸಂಧ್ಯಾ ಎಸ್.ಪೈ ಆಶಯ ವ್ಯಕ್ತ ಪಡಿಸಿದ್ದಾರೆ.
ಪತ್ರಿಕೋದ್ಯಮ ಇಂದು ಸಂಧಿಗ್ದ ಕಾಲಘಟ್ಟ ದಲ್ಲಿದೆ. ಓದುಗರ ಸಂಖ್ಯೆ ಕುಸಿಯುತ್ತಿದೆ. ಮಾಧ್ಯಮಗಳು ಕೆಲವೇ ವ್ಯಕ್ತಿ-ಸಂಸ್ಥೆಗಳ ವೈಯಕ್ತಿಕ ಆಸ್ತಿಯಾಗುತ್ತಿದೆ. ಮಾಲಕರ ರೀತಿ ನೀತಿಗಳ ನೇರಕ್ಕೆ ಮಾಧ್ಯಮಗಳು ಕಾರ್ಯಾಚರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೆಗಳು ಕೊಂದು ಉಳಿಯುವ ಸ್ಪರ್ಧೆಯ ಬದಲು ಒಟ್ಟಾಗಿ ಉಳಿವಿನ ಬಗ್ಗೆ ಚರ್ಚಿಸುವುದು ಸಾಧ್ಯವಾಗಬೇಕು ಎಂದರು.
ಪತ್ರಿಕೋದ್ಯಮ ಗಟ್ಟಿಗೊಳ್ಳಲಿ :
ಮಂಗಳೂರು ನಗರದಲ್ಲಿ ನಡೆಯುತ್ತಿರುವ ೩೫ನೆಯ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ರಾಜ್ಯದಲ್ಲಿ ಪತ್ರಿಕೋದ್ಯಮ ಗಟ್ಟಿಯಾಗಲು ಮತ್ತು ಪತ್ರಕರ್ತರ ಜೀವನ ಹಸನಾಗಲು ಸಹಕಾರಿಯಾಗಲಿ ಎಂದು ಹಾರೈಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಿದಲ್ಲಿ ಅದನ್ನು ಆದ್ಯತೆಯಲ್ಲಿ ಪರಿಶೀಲನೆ ನಡೆಸಿ ನಿರ್ಧಾರಕ್ಕೆ ಬರಲಿದೆ ಎಂದರು.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.  ಸಚಿವ ಕೋಟ ಶ್ರೀನಿವಾಸ ಪೂಜಾರಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಸಂಧ್ಯಾ ಎಸ್.ಪೈ ‘ಪತ್ರಕರ್ತ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಯು.ಟಿ.ಖಾದರ್, ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಸಂಗೀತ ನಿರ್ದೇಶಕ ಗುರುಕಿರಣ್, ಏಷ್ಯಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ಎಚ್.ಬಿ.ಮದನ ಗೌಡ, ಅದಾನಿ ಕಂಪೆನಿಯ ಕಿಶೋರ್ ಆಳ್ವ ರಾಜ್ಯ ಪತ್ರರ್ಕತರ ಸಂಘದ ಪದಾಧಿಕಾರಿಗಳು, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕೆ.ಆನಂದ ಶೆಟ್ಟಿ, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.
ಗೋವಿನಂತಿರಬೇಕು: ಡಾ.ಡಿ.ವೀರೇಂದ್ರ ಹೆಗ್ಗಡೆ
ಪತ್ರಕರ್ತರು ಪವಿತ್ರವಾದ ಗೋವಿನಂತಿರಬೇಕು. ಗೋವು ಯಾವು ವಸ್ತುವನ್ನು ತಿಂದರೂ ಶುದ್ಧವಾದ ಹಾಲನ್ನು ಕೊಡುತ್ತದೆ. ಪತ್ರಕರ್ತರು ಯಾವುದೇ ವಿಷಯದ ಬಗ್ಗೆ ವರದಿ ಮಾಡಿದರೂ ಅದು ಸಮಾಜದ ಅಭಿವೃದ್ಧಿ, ಸೌಹಾರ್ದತೆ ಮತ್ತು ಸಾಮರಸ್ಯಕ್ಕೆ ಸಹಕಾರಿಯಾಗಿರಬೇಕು ಎಂದು ಸಾನಿಧ್ಯ ವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನುಡಿದರು.
ಪತ್ರಕರ್ತರ ತಾಳ್ಮೆ ನಿಜಕ್ಕೂ ಶ್ಲಾಘನೀಯವಾಗಿದೆ. ಸಭೆ ಸಮಾರಂಭಗಳಲ್ಲಿ ಮಾಧ್ಯಮ ಪ್ರತಿನಿಧಿಗಳು ಕಾಯುವುದನ್ನು ಕಂಡಿದ್ದೇವೆ ಎಂದು ಹೇಳಿದ ಧರ್ಮಾಧಿಕಾರಿಯವರು, ತಾಳ್ಮೆ ಎಂಬುದು ಯಶಸ್ಸಿಗೆ ರಹದಾರಿಯಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss