ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮಾಜಿ ನಾಯಕಿ ವಿ.ಕೆ ಶಶಿಕಲಾ ಜನವರಿ 27ರಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಲಿದ್ದಾರೆ ಎಂದು ಅವರ ವಕೀಲ ಎನ್ ರಾಜಾ ಸೆಂಥೂರ್ ಪಾಂಡಿಯನ್ ತಿಳಿಸಿದ್ದಾರೆ.
ಅವರ ಬಿಡುಗಡೆ ಬಗ್ಗೆ ಪ್ರಶ್ನಿಸಿ ಪಾಂಡಿಯನ್ ಅವರು ಮಾಡಿದ್ದ ಮೇಲ್ಗೆ ಉತ್ತರವಾಗಿ ಬಿಡುಗಡೆ ದಿನವನ್ನು ತಿಳಿಸಿರುವುದಾಗಿ ಹೇಳಲಾಗಿದೆ.
ದಿವಂಗತ ಜೆ.ಜಯಲಲಿತಾ ಸೇರಿದಂತೆ ನಾಲ್ವರಿಗೆ ಸಂಪತ್ತು ಸಂಗ್ರಹಿಸಿದ್ದಕ್ಕಾಗಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯವು 2014ರಲ್ಲಿ ವಿಧಿಸಿತ್ತು. ಈ ವಿಚಾರವಾಗಿ ಆರೋಪಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2017ರಲ್ಲಿ ಸುಪ್ರೀಂ ಕೋರ್ಟ್ ಅದೇ ತೀರ್ಪನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ 2017ರ ಫೆಬ್ರವರಿ 15ರಂದು ಶಶಿಕಲಾ ಕಾರಾಗೃಹ ಅಧಿಕಾರಿಗಳ ಮುಂದೆ ಶರಣಾಗಿದ್ದರು.
ಶಶಿಕಲಾ ಅವರ ಕಡೆಯಿಂದ ಬರಬೇಕಾದ ದಂಡ ಬಂದರೆ ಜನವರಿ 27ರಂದು ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ನ್ಯಾಯಾಲಯ ಸೆಪ್ಟೆಂಬರ್ನಲ್ಲಿ ತಿಳಿಸಿತ್ತು. ಅದರಂತೆ ಆಕೆಯ ಕುಟುಂಬ 10 ಕೋಟಿ 10 ಸಾವಿರ ರೂಪಾಯಿ ದಂಡವನ್ನು ಶಶಿಕಲಾ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.