ಚಿಕ್ಕಮಗಳೂರು: ಕನ್ನಡಿಗರ ಔದಾರ್ಯವನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು. ನಾಡಿನ ನೆಲ, ಜಲ, ಭಾಷೆ, ಗಡಿ ತಂಟೆಗೆ ಯಾರೇ ಬಂದರೂ ಅವರಿಗೆ ತಕ್ಕ ಪಾಠ ಕಲಿಸಿಯೇ ತೀರಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ , ಪ್ರವಾಸೋದ್ಯಮ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ಹೇಳಿದರು.
ಅವರು ಭಾನುವಾರ ನಗರದ ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗಡಿಭಾಗದ ತಂಟೆಕೋರರು ಗಡಿಯೊಳಗಿನ ಪರಭಾಷಾ ವ್ಯಾಮೋಹಿಗಳು ಕನ್ನಡದ ನೆಲದಲ್ಲಿದ್ದೇ ಕನ್ನಡವನ್ನು ಹೀಗಳೆಯುವ ಭಾಷಾ ವಿರೋಧಿಗಳಿಗೆ ಬಿಸಿ ಮುಟ್ಟಿಸಿ ಸರಿದಾರಿಗೆ ತರಬೇಕಾಗಿದೆ ಎಂದರು.
ಕನ್ನಡದ ಗೇಯತೆ ಮತ್ತು ಸಿರಿವಂತಿಕೆಯನ್ನು ಬೆಳಗಿ ಕೀರ್ತಿಶೇಷರಾದವರನ್ನೂ ಈ ಸಂದರ್ಭದಲ್ಲಿ ನೆನೆಯುವುದರ ಜೊತೆಗೆ ನಾಡಿಗೆ ಅವರು ಕೊಟ್ಟ ಕೊಡುಗೆ, ಜೀವನಾದರ್ಶವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದರು.
ಆಧುನಿಕ ತಂತ್ರಜ್ಞಾನ ಬದಲಾದ ಸಾಮಾಜಿಕ ಚಿತ್ರಣ, ಪರಭಾಷೆಗಳ ಭೋರ್ಗರೆತದ ಮಧ್ಯೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ತಿಳಿಸಿದರು.
ಈ ನಾಡು ನಮ್ಮದು. ಈ ಭೂಮಿ ನಮ್ಮದು ಎಂಬ ಅಭಿಮಾನವನ್ನು ಪ್ರತಿಯೊಬ್ಬರಲ್ಲೂ ಉಕ್ಕಿಸಬೇಕಿದೆ. ಆ ದಿಕ್ಕಿನಲ್ಲಿ ಎಲ್ಲರೂ ಕೈಜೋಡಿಸಿ ದುಡಿಯೋಣ ಎಂದು ತಿಳಿಸಿದರು.
ರಾಜ್ಯಾದ್ಯಂತ ಈಗ ಎಲ್ಲೆಲ್ಲೂ ಕನ್ನಡದ ಹಾಡು, ಮಾತು, ಮಂಥನದ್ದೇ ಸುದ್ದಿಯಾಗಿದೆ. ಕನ್ನಡ ಜಗದಗಲ ವಿಸ್ತರಿಸಿಕೊಳ್ಳಬೇಕೆಂಬ ಮಹದಾಸೆಯು ನಿಜವಾಗಲೆಂದು ಹಾರೈಸುವ ಈ ಹೊತ್ತಿನಲ್ಲಿ ಭಾಷೆ, ನೆಲ, ಜಲದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಮನುಷ್ಯ ಮನುಷ್ಯರ ನಡುವೆ ಭಾವದ ಬೆಸೆಯುವ ಭಾಷೆ ನಮ್ಮೆಲ್ಲರ ಜೀವ ಭಾವವಾಗಬೇಕು ಎಂದರು.
ಕನ್ನಡ ಭಾಷೆ ಕರ್ನಾಟಕದಲ್ಲಿ ಸಾರ್ವಭೌಮತ್ವವನ್ನು ಪಡೆಯಬೇಕಾದರೆ ಸರ್ವ ಕನ್ನಡಿಗರ ಸತ್ ಸಂಕಲ್ಪ ಸರ್ಕಾರದ ಹಂಬಲಕ್ಕೆ ಜೊತೆಗೂಡಬೇಕಾಗುತ್ತದೆ. ಹಾಗಾದಾಗ ಮಾತ್ರ ಕನ್ನಡದ ಮತ್ತೊಂದು ಪರ್ವ ಕಾಲವನ್ನು ನಾವು ಆರಂಭಿಸಲು ಸಾಧ್ಯವಾಗುತ್ತದೆ ಎಂದರು.
ದೇಶದ ನವಪೀಳಿಗೆಯನ್ನು ಸ್ವಾಭಿಮಾನಿ ಹಾಗೂ ಸ್ವಾವಲಂಬಿಯಾಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಲ್ಲಿ ಬೋಧನೆಗೆ ಆಯ್ದುಕೊಂಡ ಭಾಷೆ ಮಾತೃಭಾಷೆಯೇ ಆದರೆ ಮಗುವಿಗೆ ವಿಷಯ ಅತ್ಯಂತ ಸ್ಪಷ್ಟವಾಗಿ. ಸರಳವಾಗಿ ಅರ್ಥವಾಗುತ್ತದೆ. ಪ್ರಾದೇಶಿಕ ಹಾಗೂ ವಿದೇಶಿ ಭಾಷಾ ಕಲಿಕೆಗೂ ಅವಕಾಶವಿರುವುದರಿಂದ ಭವಿಷ್ಯದ ಸಂವಹನಕ್ಕೆ ಇದು ಅನುಕೂಲಕರವಾಗಲಿದೆ ಎಂದರು.
ಪ್ರವಾಸೋದ್ಯಮ ಎನ್ನುವುದು ಒಂದು ರಾಜ್ಯ ಹಾಗೂ ಹಲವು ಜಗತ್ತುಗಳು ಎಂಬ ಪರಿಕಲ್ಪನೆಯದ್ದಾಗಿದೆ. ಇಲಾಖೆಯ ಕಾರ್ಯ ಗೌರವಗಳು ತುಂಬಾ ಸವಾಲಿನದ್ದು ಮತ್ತು ಹೊಸ ಹೊಳಹುಗಳನ್ನು ನಿರಂತರವಾಗಿ ನೀಡುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2020-25 ಅನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ 5 ಸಾವಿರ ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಹೊಂದಿದ್ದೇವೆ ಎಂದರು.
2017 ರಿಂದ ಬಾಕಿ ಇದ್ದ ಕ್ರೀಡಾ ಕ್ಷೇತ್ರದ ಏಕಲವ್ಯ ಜೀವಮಾನ ಸಾಧನೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ ಪೆÇೀಷಕ ಪ್ರಶಸ್ತಿಗಳಿಗೆ 69 ಕ್ರೀಡಾಪಟುಗಳನ್ನು ಆಯ್ಕೆ ಮಾಡಿದ್ದು, ನ.2 ರಂದು ಪ್ರಶಸ್ತಿ ವಿತರಿಸಲಾಗುವುದು ಎಂದರು.
ಇದಕ್ಕೂ ಮುನ್ನ ಸಚಿವರು ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಜಿ.ಸೋಮಶೇಖರಪ್ಪ, ತಾ.ಪಂ. ಅಧ್ಯಕ್ಷೆ ಶಾರದಾ ಶಶಿಧರ್, ನಗರಾಭಿವೃದ್ಧಿ ಪ್ರಾ„ಕಾರದ ಅಧ್ಯಕ್ಷ ಆನಂದ್, ಎಪಿಎಂಸಿ ಅಧ್ಯಕ್ಷ ಶಿವೇಗೌಡ, ಜಿಲ್ಲಾ„ಕಾರಿ ಡಾ.ಬಗಾದಿ ಗೌತಮ್, ಜಿ.ಪಂ. ಸಿಇಒ ಎಸ್.ಪೂವಿತ, ಎಸ್ಪಿ ಎಂ.ಎಚ್.ಅಕ್ಷಯ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಎಎಸ್ಪಿ ಎನ್.ಎಸ್.ಶ್ರುತಿ ಇತರರು ಭಾಗವಹಿಸಿದ್ದರು.
ಇದೇ ವೇಳೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಿಸಲಾಯಿತು. ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಮೋಹಿನಿ ಸಿದ್ದೇಗೌಡ, ಎಂ.ಎನ್.ಷಡಕ್ಷರಿ ಅವರನ್ನು ಗೌರವಿಸಲಾಯಿತು.
ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯೋತ್ಸವ ಸಮಾರಂಭ ಅತ್ಯಂತ ಸರಳವಾಗಿ ಆಚರಿಸಲ್ಪಟ್ಟಿತು. ಪ್ರತಿ ವರ್ಷ ಇರುತ್ತಿದ್ದ ನಾಡು-ನುಡಿಯ ಇತಿಹಾಸ ಬಿಂಬಿಸುವ ಸ್ತಬ್ಧ ಚಿತ್ರಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ರದ್ದಾಗಿದ್ದವು.