ಹೊಸದಿಗಂತ ವರದಿ, ಉಡುಪಿ:
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲಿನ ಬಗ್ಗೆ ಕನಸಲ್ಲೂ ಭಯಭೀತರಾಗುತ್ತಿದ್ದಾರೆ. ಪರಾಭವಗೊಂಡು ವರ್ಷ ಕಳೆದರೂ ಇನ್ನೂ ಆ ಹತಾಶೆಯಿಂದ ಹೊರಗೆ ಬಂದಿಲ್ಲ. ಹಾಗಾಗಿ ತನ್ನ ಸೋಲಿಗೆ ಬಿಜೆಪಿ-ಜೆಡಿಎಸ್ ಕಾರಣ ಎಂದೆಲ್ಲ ಹೇಳುತ್ತಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದರು.
ನಾವು ಸಿದ್ದರಾಮಯ್ಯ ಅವರನ್ನು ಖಂಡಿತವಾಗಿಯೂ ಸೋಲಿಸುವ ಪ್ರಯತ್ನವನ್ನು ಮಾಡಿ ಯಶಸ್ವಿಯಾಗಿದ್ದೇವೆ. ನಾವು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವುದಕ್ಕಾಗಿ ಅಲ್ಲ. ನಾವು ನಮ್ಮ ರಾಜಕೀಯ ಮಾಡಿದ್ದೇವೆ, ಅವರಿಗೆ ಸಾಧ್ಯ ಇದ್ದರೆ ಅವರ ರಾಜಕೀಯ ಮಾಡಲಿ ಎಂದು ಶೋಭಾ ಸಲಹೆ ಮಾಡಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶೋಭಾ ಕರಂದ್ಲಾಜೆ, ಗೋಹತ್ಯೆ ನಿಷೇಧ ಕಾಯ್ದೆಗೆ ಸಿದ್ದರಾಮಯ್ಯ ವಿರೋಧ ಮಾಡುವುದು ಸಹಜ. ಅವರ ಅಧಿಕಾರ ಅವಧಿಯಲ್ಲಿಯೇ ಗೋಹತ್ಯೆ ನಿಷೇಧ ಜಾರಿಗೆ ಬರಬಾರದೆಂದು ರಾಜ್ಯಪಾಲರ ಮೇಲೆ ಒತ್ತಡ ಹಾಕಿದ್ದರು. ಅಂತಹವರು ಈಗ ಬಿಜೆಪಿ ಸರಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ವಿರೋಧಿಸುವುದು ಸಹಜ ಎಂದು ಉತ್ತರಿಸಿದರು