ಹೊಸ ದಿಗಂತ ವರದಿ, ಚಿತ್ರದುರ್ಗ:
ಇತ್ತೀಚಿನ ದಿನಗಳಲ್ಲಿ ಪರಿಸರ ಸಾಕಷ್ಟು ಕಲುಷಿಯವಾಗುತ್ತಿದೆ. ಹಾಗಾಗಿ ಸಿಎನ್ಜಿ ಇಂಧನ ಬಳಕೆ ಅನಿವಾರ್ಯವಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ದಾವಣಗೆರೆ ರಸ್ತೆಯಲ್ಲಿನ ತಮ್ಮ ನಿವಾಸದ ಬಳಿ ನೂತನವಾಗಿ ನಿರ್ಮಿಸಲಾಗಿರುವ ಸಿಎನ್ಜಿ ಇಂಧನದ ಜಿಹೆಚ್ಆರ್ ಫ್ಯೂಯಲ್ ಫಿಲ್ಲಿಂಗ್ ಸ್ಟೇಷನ್ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ರಾಜದಾನಿ ನವದೆಹಲಿಯಲ್ಲಿ ಪರಿಸರ ಮಾಲಿನ್ಯದ ಕಾರಣ ವಾತಾವರಣ ಹಾಳಾಗಿದೆ. ಇದರಿಂದ ಶುದ್ಧ ಗಾಲಿಯ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇತರೆಡೆಗಳಲ್ಲಿ ಇಂತಹ ಪರಿಸ್ಥಿತಿ ಬರುವುದನ್ನು ತಡೆಯಲು ಸಿಎನ್ಜಿ ಇಂಧನ ಬಳಕೆ ಉತ್ತಮ ಎಂದರು.
ಪ್ರಪಂಚದ ವಿವಿಧ ದೇಶಗಳಲ್ಲಿ ನಡೆದ ಸಮ್ಮೇಳನಗಳಲ್ಲಿ ಭೂಮಿಯ ತಾಪಮಾನ ಹೆಚ್ಚಳ ಹಾಗೂ ಪರಿಸರ ಮಾಲಿನ್ಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದಾಗ್ಯೂ ಇದನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ನಾಶದಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಪರಿಸರ ಮಾಲಿನ್ಯ ತಡೆ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿದ್ಯುತ್ ಬಳಕೆಯ ವಾಹನಗಳನ್ನು ಖರೀದಿಸಲು ಸಬ್ಸಿಡಿ ನೀಡಲಾಗುತ್ತಿದೆ. ಮರ-ಗಿಡಗಳನ್ನು ಕಡಿಯುವುದನ್ನು ತಪ್ಪಿಸಲು ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ ಎಂದರು.
ಪರಿಸರ ಮಾಲಿನ್ಯ ನಿಯಂತ್ರಣ ದೃಷ್ಠಿಯಿಂದ ಇದೇ ಮೊದಲ ಬಾರಿಗೆ ನಗರದಲ್ಲಿ ಸಿಎನ್ಜಿ ಇಂಧನ ಕೇಂದ್ರ ಆರಂಭಿಸಲಾಗಿದೆ. ಅಲ್ಲದೇ ಗೇಲ್ ಕಂಪನಿಯವರು ಮನೆ ಮನೆಗೆ ಅಡುಗೆ ಅನಿಲ ಪೂರೈಸಲು ಪೈಪ್ಲೈನ್ ನಿರ್ಮಿಸುತ್ತಿದ್ದಾರೆ. ನೆಹರು ನಗರ, ಧವಳಗಿರಿ ಬಡಾವಣೆ, ಬಿವಿಕೆ ಲೇಔಟ್ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಾದ್ಯಂತ ಅಡುಗೆ ಅನಿಲ ಪೂರೈಕೆಯ ವ್ಯವಸ್ಥೆ ಮಾಡಲಾಗುವುದು. ಅದರಂತೆ ೨೪x೭ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ದೇಶವು ಅಭಿವೃದ್ಧಿಯತ್ತ ಸಾಗಿದಂತೆ ಹೊಸ ಹೊಸ ಸೌಲಭ್ಯಳನ್ನು ಕಲ್ಪಿಸಲಾಗುತ್ತಿದೆ. ಅದರಂತೆ ಈಗ ಸಿಎನ್ಜಿ ಇಂಧನ ಕೇಂದ್ರ ಚಿತ್ರದುರ್ಗದಲ್ಲಿ ಆರಂಭವಾಗಿರುವುದು ಉತ್ತಮ ಬೆಳವಣಿಗೆ. ವಾಹನ ಸವಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಆ ಮೂಲಕ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ಕರೆ ನೀಡಿದರು.
ಮುಖ್ಯ ವ್ಯವಸ್ಥಾಪಕ ರಾಜೇಂದ್ರಕುಮಾರ್, ಸಂದೀಪ್ ಸೇಲ್ಸ್ ಆಫೀಸರ್ ಸತೀಶ್ ಕಾರ್ಯಕ್ರಮ ಕುರಿತು ಮಾತನಾಡಿದರು. ಜಿ.ಪಂ. ಸದಸ್ಯ ಅಜ್ಜಪ್ಪ ಮತ್ತಿತರರು ಹಾಜರಿದ್ದರು. ರಮೇಶ್ ಕಾರ್ಯಕ್ರಮ ನಿರೂಪಿಸಿದರು.