Friday, July 1, 2022

Latest Posts

ಪರಿಹಾರದ ಮೊತ್ತ ಪಡೆಯಲು ನಾರಾಯಣಾಚಾರ್ ಪುತ್ರಿಯರು ಅರ್ಹರು: ಮಾಧ್ಯಮಗಳ ವರದಿಗೆ ಕುಟುಂಬ ವರ್ಗದ ಸ್ಪಷ್ಟನೆ

ಕೊಡಗು: ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದ ಸಂದರ್ಭ ಸಾವಿಗೀಡಾದ ಟಿ.ಎಸ್.ನಾರಾಯಣ ಆಚಾರ್ ಅವರ ಕುಟುಂಬಕ್ಕೆ ಸರಕಾರ ನೀಡುವ ಪರಿಹಾರಕ್ಕೆ ಅವರ ಪುತ್ರಿಯರಿಬ್ಬರೂ ಹಕ್ಕುದಾರರಾಗಿದ್ದು, ಈ ಬಗ್ಗೆ ಕುಟುಂಬ ವರ್ಗದವರಿಂದ ಯಾವುದೇ ಆಕ್ಷೇಪವಿಲ್ಲ ಎಂದು ಕುಟುಂಬದ ವಕ್ತಾರ ಜಯಪ್ರಕಾಶ್ ರಾವ್ ಹಾಗೂ ಉದ್ಯಮಿ ಸುಧಾಕರ ಆಚಾರ್ ಸ್ಪಷ್ಟಪಡಿಸಿದ್ದಾರೆ.

ನಾರಾಯಣ ಆಚಾರ್ ಅವರ ಪುತ್ರಿಯರು ಅನ್ಯ ಧರ್ಮೀಯರನ್ನು ವಿವಾಹವಾಗಿದ್ದು, ಅವರು ಪರಿಹಾರದ ಮೊತ್ತ ಪಡೆಯಲು ಅರ್ಹರಲ್ಲ ಎಂದು ಕೆಲವು ಮಾಧ್ಯಮಗಳು ಮಾಡಿರುವ ವರದಿಗೆ ಪ್ರತಿಕ್ರಯಿಸಿರುವ ಅವರು, ಪ್ರಾಪ್ತ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ತಮ್ಮ ಇಚ್ಛೆಯಂತೆ ವಿವಾಹವಾಗುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನೀಡಿದೆ. ನಾರಾಯಣ ಆಚಾರ್ ಅವರ ಮಕ್ಕಳು ಕೂಡೂ ಹಿರಿಯರ ಅನುಮತಿಯೊಂದಿಗೆ ಹಿಂದೂ ಸಂಪ್ರದಾಯದಂತೆಯೇ ಅನ್ಯ ಧರ್ಮೀಯರನ್ನು ವಿವಾಹವಾಗಿದ್ದು, ಇಂದಿಗೂ ಹಿಂದೂ ಸಂಪ್ರದಾಯವನ್ನೇ ಅನುಸರಿಸುತ್ತಿದ್ದಾರೆ. ಏನೇ ಆಗಿದ್ದರೂ, ಅವರು ನಾರಾಯಣ ಆಚಾರ್ ಅವರ ಪುತ್ರಿಯರೇ ಆಗಿರುವ ಕಾರಣ ಸರಕಾರ ಕೊಡಮಾಡುವ ಪರಿಹಾರಕ್ಕೆ ಎಲ್ಲಾ ಹಕ್ಕನ್ನು ಅವರು ನಿಶರ್ತವಾಗಿ ಹೊಂದಿದ್ದಾರೆ ಎಂದು ಅವರುಗಳು ತಿಳಿಸಿದ್ದಾರೆ.

ವಿದೇಶದಲ್ಲಿ ಬಳಹ ವರ್ಷಗಳಿಂದ ನೆಲೆಸಿರುವವವರಿಗೆ ಬೇರೆ ಯಾವುದೇ ಅಧಿಕೃತ ದಾಖಲೆಗಳಿಲ್ಲದಿರುವುದರಿಂದ ಅವರು ಪರಿಹಾರದ ಚೆಕ್ ಪಡೆಯುವ ಸಲುವಾಗಿ ತಮ್ಮ ಪಾಸ್‍ಪೋರ್ಟ್‍ನಲ್ಲಿ ದಾಖಲಾಗಿರುವ ಹೆಸರನ್ನೇ ನೀಡಿದ್ದು ಇದರಲ್ಲಿ ತಪ್ಪೇನು ಎಂದು ಜಯಪ್ರಕಾಶ ರಾವ್ ಹಾಗೂ ಸುಧಾಕರ ಆಚಾರ್ ಪ್ರಶ್ನಿಸಿದ್ದಾರೆ.

ಯಾವುದೇ ಹುನ್ನಾರವಿಲ್ಲ: ಕಾವೇರಮ್ಮನ ಆಶೀರ್ವಾದದಿಂದ ಅವರಿಬ್ಬರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವ ಕಾರಣ ಈ ಸಣ್ಣ ಮೊತ್ತ ಕೇವಲ ಆಶೀರ್ವಾದ ರೂಪವಾಗಿದೆಯೇ ಹೊರತು ದುರಾಸೆಯ ವಿಚಾರವೇ ಇಲ್ಲ. ಅಥವಾ ಇದರ ಹಿಂದೆ ಯಾವುದೇ ಹುನ್ನಾರವೂ ಇಲ್ಲ ಎಂದು ಅವರು ಹೇಳಿದ್ದಾರೆ.

ಭಾರತೀಯ ವಿದೇಶಿ ವಿನಿಮಯ ಕಾಯಿದೆ ಪ್ರಕಾರ ಅವರು ನಮ್ಮ ದೇಶದಿಂದ ಹೊರಗೆ ಹಣವನ್ನು ಕೊಂಡೊಯ್ಯಲಾಗದು ಎಂಬ ಸತ್ಯವನ್ನು ಟಿವಿ ಮಾಧ್ಯಮದ ವರದಿಗಾರರು ತಿಳಿಯದಿರುವುದು ವಿಷಾದನೀಯ ಎಂದು ಟೀಕಿಸಿದ್ದಾರೆ.

ಯುವಕರ ಕುಟುಂಬಕ್ಕೆ ನೆರವು: ಕಾವೇರಮ್ಮನ ಆಶೀರ್ವಾದದಿಂದ ನಾರಾಯಣ ಆಚಾರ್ ಅವರ ಪುತ್ರಿಯರ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತವನ್ನು ಅಧಿಕೃತವಾಗಿ ಸ್ವೀಕರಿಸಿ ಅದಕ್ಕೆ ತಮ್ಮ ಪಾಲಿನ ದೇಣಿಗೆ ಸೇರಿಸಿ ಮೃತ ಯುವಕರಿಬ್ಬರ ಬಂಧುಗಳಿಗೆ ನೀಡುವ ಉತ್ತಮ ವಿಚಾರ ಅವರ ಮಕ್ಕಳಿಬ್ಬರಲ್ಲಿ ಇದ್ದರೂ, ಈ ಸತ್ಯವನ್ನು ಕೇಳಲು ಯಾವುದೇ ವರದಿಗಾರರು ಹೋಗಿಲ್ಲ. ಬದಲಾಗಿ ಬ್ರೇಕಿಂಗ್ ಹಾಗೂ ಎಕ್ಸ್‍ಕ್ಲೂಸಿವ್ ಎಂಬ ಬೊಗಳಿಕೆಗೆ ಸೀಮಿತಗೊಳಿಸಿದ್ದಾರೆ ಎಂದು ಜಯಪ್ರಕಾಶ್ ರಾವ್ ಹಾಗೂ ಸುಧಾಕರ ಆಚಾರ್ ಕಿಡಿಕಾರಿದ್ದಾರೆ.

ನಾರಾಯಣ ಆಚಾರ್ ಅವರ ಸಹೋದರಿ ಸುಶೀಲಾ ಅವರಿಗೆ ಪರಿಹಾರ ಧನ ನೀಡುವ ಬಗ್ಗೆ ಕೂಡಾ ಕುಟುಂಬ ಚರ್ಚಿಸಿದೆ. ಎಲ್ಲಾ ಕುಟುಂಬದಲ್ಲಿರುವಂತೆ ಇಲ್ಲಿ ಕಂಡು ಬಂದ ಆಂತರಿಕ ಭಿನ್ನಾಭಿಪ್ರಾಯ ದೂರವಾಗಿ ಒಮ್ಮತ ಲಭಿಸಿದೆ. ಉಳಿದದ್ದು ಜಿಲ್ಲಾಡಳಿತಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss