Tuesday, July 5, 2022

Latest Posts

ಪರೀಕ್ಷೆಗೆ ಉಡುಪಿ ಜಿಲ್ಲೆಯಿಂದ ಒಟ್ಟು 94 ಮಂದಿಯ ಗಂಟಲ ದ್ರವ ಮಂಗಳೂರಿನ ಪ್ರಯೋಗಾಲಯಕ್ಕೆ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಅಂತಾರಾಷ್ಟ್ರೀಯ ಪ್ರಯಾಣಿಕರು ಸಹಿತ ಉಡುಪಿ ಜಿಲ್ಲೆಯಿಂದ ಒಟ್ಟು 94 ಮಂದಿಯ ಗಂಟಲ ದ್ರವ ಮಾದರಿಗಳನ್ನು ಕೋವಿಡ್-19 ಪರೀಕ್ಷೆಗಾಗಿ ಮಂಗಳೂರಿನ ಪ್ರಯೋಗಾಲಯಕ್ಕೆ ಗುರುವಾರ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಯುಎಇನಿಂದ ಉಡುಪಿ ಜಿಲ್ಲೆಗೆ ಆಗಮಿಸಿರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿ ವಿವಿಧ ಹಾಟ್‌ಸ್ಪಾಟ್‌ಗಳಿಂದ ಬಂದಿರುವ ಒಟ್ಟು 77 ಮಂದಿಯ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ಜೊತೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 6 ಜನ, ಕೋವಿಡ್-19 ಶಂಕಿತ ರೋಗ ಲಕ್ಷಣವಿರುವ ಒಬ್ಬರು, ಸೋಂಕಿತರೊಂದಿಗೆ ಸಂಪರ್ಕ ಹೊಂದಿದ ಇಬ್ಬರು ಹಾಗೂ ಶೀತಜ್ವರದ ಬಾಧೆಗೊಳಗಾದ 8 ಮಂದಿಯ ಗಂಟಲ ದ್ರವ ಮಾದರಿಯನ್ನು ಕಳುಹಿಸಲಾಗಿದೆ.
ಗುರುವಾರ ಕೋವಿಡ್-19 ಸೋಂಕಿನ ಪರೀಕ್ಷೆ ನಡೆದ 17 ಮಂದಿಯ ವರದಿಗಳು ಆರೋಗ್ಯ ಇಲಾಖೆ ಕೈಸೇರಿವೆ. ಯಾರಲ್ಲಿಯೂ ಸೋಂಕು ಕಾಣಿಸಿಕೊಂಡಿಲ್ಲ ಎಂದು ವರದಿಗಳು ದೃಢಪಡಿಸಿವೆ. ಜಿಲ್ಲೆಯಲ್ಲಿ ಈವರೆಗೆ ಪರೀಕ್ಷೆಗಾಗಿ ಒಟ್ಟು 1831 ಮಂದಿಯ ಗಂಟಲ ದ್ರವದ ಮಾದರಿ ಪಡೆಯಲಾಗಿದೆ. ಇದರಲ್ಲಿ 1689 ಮಂದಿಗೆ ಸೋಂಕು ಇಲ್ಲದಿರುವುದು ಸಾಬೀತಾಗಿದೆ. ಸೋಂಕು ಕಾಣಿಸಿಕೊಂಡ ಮೂವರು ಗುಣಮುಖರಾಗಿದ್ದಾಾರೆ. ಇನ್ನೂ 139 ಮಂದಿಯ ಕೋವಿಡ್ ಪರೀಕ್ಷಾ ವರದಿಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಡಿಎಚ್‌ಒ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿರುವ ಪ್ರತ್ಯೇಕಿತ ವಾರ್ಡ್‌ಗಳಿಗೆ ಮತ್ತೆ ಹೊಸದಾಗಿ 12 ಮಂದಿ ದಾಖಲಾಗಿದ್ದಾರೆ. ಐದು ಜನ ತೀವ್ರ ಉಸಿರಾಟದ ತೊಂದರೆಯಿಂದ ಬಂದರೆ, ಏಳು ಮಂದಿ ಶೀತಜ್ವರ ಬಾಧಿತರಾಗಿ ಆಸ್ಪತ್ರೆಗೆ ಬಂದಿದ್ದಾರೆ. ಗುರುವಾರ 11 ಮಂದಿ ಪ್ರತ್ಯೇಕಿತ ವಾರ್ಡ್‌ಗಳ ನಿಗಾದಿಂದ ಬಿಡುಗಡೆಯಾಗಿದ್ದು, ಇನ್ನೂ 65 ಮಂದಿ ನಿಗಾದಲ್ಲಿದ್ದಾರೆ. ಆಸ್ಪತ್ರೆ ದಿಗ್ಬಂಧನಕ್ಕೆ ಹೊಸದಾಗಿ ನಾಲ್ವರು ಸೇರ್ಪಡೆಯಾಗಿದ್ದು, ಒಟ್ಟು 15 ಮಂದಿ ನಿಗಾದಲ್ಲಿದ್ದಾರೆ. ನಾಲ್ವರು ಬಿಡುಗಡೆಯಾಗಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆ, ಪ್ರಯಾಣಿಕರು ಮತ್ತು ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಹೊಸದಾಗಿ 42 ಮಂದಿ ಒಟ್ಟು 3909 ಮಂದಿ ನಿಗಾಕ್ಕೆ ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 28 ದಿನಗಳ ಗೃಹ ದಿಗ್ಬಂಧನ ಅವಧಿಯನ್ನು ಹೊಸದಾಗಿ 59 ಮಂದಿ ಒಟ್ಟು 2997 ಜನರು ಪೂರೈಸಿದ್ದಾರೆ. ಹೊಸದಾಗಿ 35 ಜನ ಸೇರಿ ಒಟ್ಟು 3663 ಮಂದಿ 14 ದಿನಗಳ ಗೃಹ ದಿಗ್ಬಂಧನವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ 677 ಮಂದಿ ಗೃಹ ದಿಗ್ಬಂಧನದಲ್ಲಿದ್ದಾರೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss